ಸೋಮವಾರಪೇಟೆ, ಜು. 4: ವಿಕಲಚೇತನರು ತಮ್ಮ ಗುರುತಿನ ಚೀಟಿಗಾಗಿ ಆಗಾಗ್ಗೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಶಾಸಕರು ವಿಶೇಷ ಆಸಕ್ತಿ ವಹಿಸಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗಿಯಾದ ಫಲಾನುಭವಿಗಳಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು.ಸೋಮವಾರಪೇಟೆಯ ಶಾಸಕರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಫಲಾನುಭವಿಗಳಿಗೆ ಗುರುತಿನ ಚೀಟಿಯನ್ನು ವಿತರಿಸಿದರು.

ನಂತರ ಮಾತನಾಡಿದ ಅವರು, ವಿಕಲಚೇತನರು ಆರ್ಥಿಕವಾಗಿಯೂ ಅಶಕ್ತರಾಗಿದ್ದು, ಸರ್ಕಾರದ ಸೌಲಭ್ಯಗಳನ್ನು ಹೊಂದಿಕೊಳ್ಳಲು ಗುರುತಿನ ಚೀಟಿಯ ಅವಶ್ಯವಿತ್ತು. ಆದರೆ ಜಿಲ್ಲಾ ಕೇಂದ್ರ ಸೇರಿದಂತೆ ನಗರದ ಆಸ್ಪತ್ರೆಗಳಿಗೆ ತೆರಳಿ ದಾಖಲಾತಿ ಹೊಂದಿಸುವದು, ಸಂಬಂಧಿಸಿದ ವೈದ್ಯರನ್ನು ಭೇಟಿಯಾಗಿ ವರದಿ ನೀಡುವದು ಕಷ್ಟಕರವಾದ ಹಿನ್ನೆಲೆ ತಾನು ಕಳೆದೆರಡು ತಿಂಗಳ ಹಿಂದೆ ಎಲ್ಲಾ ವೈದ್ಯರನ್ನು ಒಂದೇ ವೇದಿಕೆಯಡಿ ಕರೆತಂದು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಮೂಲಕ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸಲಾಗಿತ್ತು ಎಂದರು.

ಶಿಬಿರದಲ್ಲಿ ತಪಾಸಣೆಗೆ ಒಳಪಟ್ಟ ಫಲಾನುಭವಿಗಳಿಗೆ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಅಂಗವಿಕಲರ ಕಲ್ಯಾಣ ಇಲಾಖೆ ಮೂಲಕ ಗುರುತಿನ ಚೀಟಿಗಳನ್ನು ತಯಾರಿಸಿದ್ದು, ಒಟ್ಟು 100 ಮಂದಿ ಫಲಾನುಭವಿಗಳಿಗೆ ಪ್ರಥಮ ಹಂತದಲ್ಲಿ ಗುರುತಿನ ಚೀಟಿ ವಿತರಿಸಲಾಗಿದೆ ಎಂದರು.