ಮಡಿಕೇರಿ, ಜೂ. 4: ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿಗೆ ರೂ. 10 ಕೋಟಿ ಅನುದಾನವನ್ನು ಮೀಸಲಿಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಯೋಜನೆ, ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಂ ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರನ್ನು ಕೋರಿದ್ದಾರೆ.ಮಡಿಕೇರಿ ತಾಲೂಕಿನ ನಾಲ್ಕುನಾಡು ಅರಮನೆ ಪ್ರವಾಸಿ ತಾಣದ 4.50 ಕಿ.ಮೀ. ರಸ್ತೆ ಅಭಿವೃದ್ಧಿಗೆ ರೂ. 4 ಕೋಟಿ, ಅಬ್ಬಿಫಾಲ್ಸ್ ಪ್ರವಾಸಿ ತಾಣದ 6.6. ಕಿ.ಮೀ. ರಸ್ತೆ ಅಭಿವೃದ್ಧಿಗೆ 3 ಕೋಟಿ ಹಾಗೂ ವೀರಾಜಪೇಟೆ ತಾಲೂಕಿನ ಇರ್ಪು ಜಲಪಾತ ಪ್ರವಾಸಿ ತಾಣದ 2 ಕಿ.ಮೀ. ರಸ್ತೆ ಅಭಿವೃದ್ಧಿಗೆ ರೂ. 3 ಕೋಟಿ ಅನುದಾನವನ್ನು ಮೀಸಲಿರಿಸುವಂತೆ ಪತ್ರ ಮುಖೇನ ಮನವಿ ಮಾಡಿದ್ದಾರೆ.