ಮಡಿಕೇರಿ, ಜು. 4: ಮಡಿಕೇರಿ ನಗರಸಭೆಯ ಮೂರನೇ ಹಂತದ ನಗರೋತ್ಥಾನ ಕಾಮಗಾರಿಯ ಕುರಿತು ವಾರ್ಡ್‍ಗಳ ಸಮ್ಮುಖದಲ್ಲಿ ತೆಗೆದುಕೊಂಡ ಕಾಮಗಾರಿಗಳನ್ನು ಅಧ್ಯಕ್ಷರು ಕೈಬಿಟ್ಟು, ಬೇರೆ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ನಗರ ಸಭೆ ಬಿಜೆಪಿ ಸದಸ್ಯರು ಇದನ್ನು ಸರಿಪಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರಿಗೆ ಕಚೇರಿಯಲ್ಲಿ ಮನವಿ ಸಲ್ಲಿಸಿದರು. ಬಿಜೆಪಿ ಸದಸ್ಯರೊಂದಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರೂ ತೆರಳಿದ್ದು, ವಿಶೇಷವಾಗಿದೆ. ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ನಗರಸಭಾ ಸದಸ್ಯ ಪಿ.ಡಿ.ಪೊನ್ನಪ್ಪ, ಈಗಾಗಲೇ ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿಗಾಗಿ 30 ಕೋಟಿ ರೂ ಅನುದಾನ ಬಂದಿದೆ. ಇದರಲ್ಲಿ ಇಂತಹದ್ದೇ ಕಾಮಗಾರಿ ಆಗಬೇಕೆಂದು, ಹಾಗೂ ಪರಿಶಿಷ್ಟ ಜಾತಿಯವರಿಗೆ ವಿಶೇಷ ಅನುದಾನವನ್ನು ಇದರಲ್ಲಿಯೇ ಇಡಬೇಕೆಂದು ಅಧ್ಯಕ್ಷರ ಸಮ್ಮುಖದಲ್ಲೇ ನಡೆದ ಸಭೆಯಲ್ಲಿ ಎಲ್ಲಾ ವಾರ್ಡ್‍ನ ಸದಸ್ಯರು ಸೇರಿ ತೀರ್ಮಾನ ಕೈಗೊಂಡಿದ್ದರು.

ಆದರೆ ಆ ನಂತರದಲ್ಲಿ ಅಧ್ಯಕ್ಷರು ಕಾಮಗಾರಿಗಳನ್ನು ಸಂಪೂರ್ಣವಾಗಿ ಬದಲಿಸಿ, ಅವರ ವಾರ್ಡ್‍ಗೂ ಕಾಮಗಾರಿಗಳನ್ನು ರೂಪಿಸದೆ ಸಚಿವರ ಸಹಿಯೂ ಇಲ್ಲದೆ ಕಾಮಗಾರಿಗಳ ಪಟ್ಟಿಯನ್ನು ಸಂಬಂಧಪಟ್ಟ ಇಲಾಖೆಗೆ ನೀಡಿದ್ದಾರೆ ಎಂದು ದೂರಿದರು.

ಉತ್ತಮ ರೀತಿಯ ಆಡಳಿತ ನಡೆಸುವಲ್ಲಿ ಅಧ್ಯಕ್ಷರು ಸಂಪೂರ್ಣವಾಗಿ

(ಮೊದಲ ಪುಟದಿಂದ) ವಿಫಲವಾಗಿದ್ದು, ಪ್ರತಿ ಹಂತದಲ್ಲೂ ಎಡವುತ್ತಿದ್ದಾರೆ. ಈ ರೀತಿ ನಾಟಕ ಮಾಡುತ್ತಿದ್ದರೆ ಈ ನಗರದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಪಿ.ಡಿ ಪೊನ್ನಪ್ಪ ಅಸಮಾಧಾನ ವ್ಯಕ್ತಪಡಿಸಿದ್ದರು.

ನಗರಸಭಾ ಉಪಾಧ್ಯಕ್ಷÀ ಟಿ.ಎಸ್.ಪ್ರಕಾಶ್ ಮಾತನಾಡಿ, ಮೂರನೇ ಹಂತದ ಯೋಜನೆಯಡಿ ಯಲ್ಲಿ ಹಣ ಬಿಡುಗಡೆಯಾಗಿದ್ದು, ಅದರಲ್ಲಿ 10 ಕೋಟಿಯನ್ನು ನಗರ ವ್ಯಾಪ್ತಿಯ ವಾರ್ಡ್‍ಗಳಿಗೆ ನೀರನ್ನು ಒದಗಿಸಲು ಮೀಸಲಿರಿಸಬೇಕೆಂದು ಚರ್ಚೆ ನಡೆಸಲಾಗಿತ್ತು. ಇದಕ್ಕೆ ಅಧ್ಯಕ್ಷರು ಒಪ್ಪಿಗೆ ಸೂಚಿಸಿದ್ದರಿಂದ ಎಲ್ಲಾ ವಾರ್ಡ್‍ನ ಕೌನ್ಸಿಲರ್‍ಗಳು ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಅಧ್ಯಕ್ಷರಿಗೆ ನೀಡಿದ್ದರು. ಆದರೆ ಅದನ್ನು ಅಧ್ಯಕ್ಷರು ಸಂಪೂರ್ಣವಾಗಿ ಬದಲಿಸಿದ್ದಾರೆ ಎಂದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, ಈ ವಿಚಾರದ ಕುರಿತು ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚೆ ನಡೆಸಿ, ಸಮಸ್ಯೆಯನ್ನು ಸರಿಪಡಿಸುವದಾಗಿ ಭರವಸೆ ನೀಡಿದರು.

ನಗರಸಭಾ ಸದಸ್ಯರಾದ ಉಣ್ಣಿಕೃಷ್ಣ, ಜುಲೇಕಾಬಿ, ಚುಮ್ಮಿದೇವಯ್ಯ, ಸಂಗೀತ ಪ್ರಸನ್ನ, ಸವಿತಾ ರಾಕೇಶ್, ಅನಿತ ಪೂವಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಪಾಲ್ಗೊಂಡಿದ್ದರು.