ಸಿದ್ದಾಪುರ, ಜು. 4: ತಾ. 6 ರಂದು ಕರೆ ನೀಡಲಾಗಿದ್ದ ನೆಲ್ಯಹುದಿಕೇರಿ ಬಂದ್‍ನ್ನು ಜಿಲ್ಲಾಧಿಕಾರಿಗಳ ಭರವಸೆ ಮೇರೆಗೆ ಮುಂದೂಡಲಾಗಿದೆ ಎಂದು ಗ್ರಾ.ಪಂ ಸದಸ್ಯ ಎ.ಕೆ. ಹಕೀಂ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈಗಾಗಲೇ ಡೆಂಘೀ ಸೇರಿದಂತೆ ಮಾರಕ ರೋಗಗಳು ಹರಡುತ್ತಿವೆ. ಕಸ ವಿಲೇವಾರಿಗೆ ಸೂಕ್ತ ಜಾಗವಿಲ್ಲದ ಕಾರಣ ಗ್ರಾ.ಪಂ.ಗೆ ಕಸ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ನೆಲ್ಯಹುದಿಕೇರಿಯ ಬೆಟ್ಟದಕಾಡುವಿನಲ್ಲಿ ಸರಕಾರ ವಶಪಡಿಸಿಕೊಂಡ ಪೈಸಾರಿ ಜಾಗದಲ್ಲಿ ಕಸ ವಿಲೇವಾರಿಗೆ ಅನುವು ಮಾಡಿಕೊಡುವದಾಗಿ ಜಿಲ್ಲಾಧಿಕಾರಿ ಗಳು ತಿಳಿಸಿದ್ದರು. ಆದರೇ ಈವರೆಗೂ ಯಾವದೇ ಪ್ರಕ್ರಿಯೆ ನಡೆಯದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಸಭೆಯಲ್ಲಿ ನೆಲ್ಯಹುದಿಕೇರಿ ಬಂದ್ ಮಾಡುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳು 15 ದಿನಗಳಲ್ಲಿ ಕಸ ವಿಲೇವಾರಿಗೆ ಜಾಗ ನೀಡುವ ಬಗ್ಗೆ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಬಂದ್‍ನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

15 ದಿನಗಳ ಬಳಿಕ ಕಸ ವಿಲೇವಾರಿಗೆ ಸೂಕ್ತ ಜಾಗ ದೊರಕದಿದ್ದರೆ ನೆಲ್ಯಹುದಿಕೇರಿ ಪಟ್ಟಣ ಬಂದ್ ಮಾಡಲಾಗುವದು ಎಂದ ಅವರು, ಗ್ರಾಮದ ಸಮಸ್ಯೆಗಳ ಪರಿಹಾರಕ್ಕಾಗಿ ರಾಜೀನಾಮೆ ಸಲ್ಲಿಸಲು ತಾವು ಬದ್ಧರಿರುವದಾಗಿ ತಿಳಿಸಿದರು. ಕಸದ ವಿಲೇವಾರಿಗೆ ಜಾಗ ನೀಡುವ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಕೈಜೋಡಿಸಿದ್ದು, ರಾಜಕೀಯ ರಹಿತ ಹೋರಾಟ ಮಾಡುವದಾಗಿ ಅವರು ಮಾಹಿತಿ ನೀಡಿದರು. ತಾ. 6 ರಂದು ನೆಲ್ಯಹುದಿಕೇರಿ ಪಟ್ಟಣದಲ್ಲಿ ಕಸ ವಿಲೇವಾರಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಎಂ.ಜಿ. ಕಾಲೋನಿಯಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ಕಸವನ್ನು ಬೇರ್ಪಡಿಸುವ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಇದ್ದು, ಎಂ.ಜಿ ಕಾಲೋನಿಯ ಎಲ್ಲ ಮನೆಗಳಿಗೂ ತಲಾ 1 ಬಕೆಟ್ ಹಾಗೂ 1 ಚೀಲಗಳನ್ನು ವಿತರಿಸಲಾಗುವದು ಎಂದರು.

ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್ ಮಾತನಾಡಿ, ನೆಲ್ಯಹುದಿಕೇರಿ ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಕಸದ ವಿಲೇವಾರಿ ಸಮಸ್ಯೆಯಿದ್ದು, ಈ ಬಗ್ಗೆ ಜಿ.ಪಂ. ಸಭೆಗಳು ಸೇರಿದಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿಯವರು 15 ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದು, ಕೆಲವು ಕಾನೂನು ತೊಡಕುಗಳಿಂದ ವಿಳಂಬವಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕಸ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಗೋಷ್ಠಿಯಲ್ಲಿ ತಾ.ಪಂ. ಸದಸ್ಯೆ ಸುಹದಾ ಅಶ್ರಫ್, ಗ್ರಾ.ಪಂ. ಉಪಾಧ್ಯಕ್ಷೆ ಸಫಿಯಾ, ಸದಸ್ಯ ಮುಸ್ತಫ ಇದ್ದರು.