ಸೋಮವಾರಪೇಟೆ,ಜು.4: ಕೆಲವೇ ತಿಂಗಳುಗಳಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣೆ ಎದುರಾಗಲಿದ್ದು, ಕೊಡಗು ಜಿಲ್ಲೆಯ ಮಟ್ಟಿಗೆ ಅಸ್ಸಾಮಿಗರ ಹೆಸರಿನಲ್ಲಿ ಅಕ್ರಮವಾಗಿ ನೆಲೆಯೂರಿರುವ ಬಾಂಗ್ಲಾದೇಶಿಗರು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳುವದಕ್ಕೆ ಬಿಜೆಪಿ ಕಾರ್ಯಕರ್ತರು ಅವಕಾಶ ನೀಡಬಾರದು ಎಂದು ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದರು.ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಬಿಜೆಪಿ ಶಿಕ್ಷಕರ ಪ್ರಕೋಷ್ಠ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಸ್ಸಾಮಿಗರ ಹೆಸರಿನಲ್ಲಿ ಕೊಡಗಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಗರು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳುವ ಸಂಭವವಿದ್ದು, ಪಕ್ಷದ ಕಾರ್ಯಕರ್ತರು ಬೂತ್‍ಮಟ್ಟದಲ್ಲಿ ಈ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು. ಬಾಂಗ್ಲಾದೇಶಿಗರು ಪಟ್ಟಿಗೆ ಸೇರ್ಪಡೆ ಯಾಗದಂತೆ ತಡೆಯೊಡ್ಡಬೇಕು. ಕೊಡಗು ಸೇರಿದಂತೆ ದೇಶದ ಆಂತರಿಕ ಭದ್ರತೆ ದೃಷ್ಟಿಯಿಂದಲೂ ಈ ಕ್ರಮ ಅನಿವಾರ್ಯವಾಗಿದೆ ಎಂದು ಹೇಳಿದರು.

ಮುಂದಿನ 2020ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಗೆ

(ಮೊದಲ ಪುಟದಿಂದ) ಸೇರಬೇಕೆಂಬ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಜಿಎಸ್‍ಟಿ ಜಾರಿಯಿಂದ ದಿನಬಳಕೆಯ ವಸ್ತುಗಳ ಬೆಲೆ ಕಡಿಮೆಯಾಗಲಿದೆ. ಈಗಾಗಲೇ ಪೆಟ್ರೋಲ್, ರಸಗೊಬ್ಬರ ಬೆಲೆ ಕಡಿಮೆಯಾಗಿದೆ. ಕಾಂಗ್ರೆಸ್ ಕೇಂದ್ರದಲ್ಲಿದ್ದ ಸಂದರ್ಭ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಯಾಗಿತ್ತು ಎಂದು ಕೆ.ಜಿ. ಬೋಪಯ್ಯ ದೂರಿದರು.

ಪಕ್ಷದ ಜಿಲ್ಲಾಧ್ಯಕ್ಷ ಭಾರತೀಶ್ ಮಾತನಾಡಿ, ಮಹಾಸಂಪರ್ಕ ಅಭಿಯಾನದಲ್ಲಿ ಜಿಲ್ಲೆಯ ಕಾರ್ಯಕರ್ತರು ಹಾಗೂ ಮುಖಂಡರು ತಪ್ಪದೇ ಭಾಗಿಯಾಗಬೇಕು ಎಂದು ಸೂಚಿಸಿದರು.