ವೀರಾಜಪೇಟೆ, ಜು. 4: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ವರ್ಗ ರಹಿತ ಜಾತ್ಯತೀತವಾಗಿ ಬಲಿಷ್ಠವಾಗಿ ಸಂಘಟಿಸಲಾಗುವದು. ಪಕ್ಷದ ಹಿತೈಷಿಗಳ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಸಂಘಟನೆ ಆಗಲಿದೆ ಎಂದು ಕಾಂಗ್ರೆಸ್ ಪಕ್ಷದ ನೂತನ ಜಿಲ್ಲಾಧ್ಯಕ್ಷ ಮುಕ್ಕಾಟಿರ ಶಿವು ಮಾದಪ್ಪ ಹೇಳಿದರು.ಅಧ್ಯಕ್ಷರ ಆಯ್ಕೆಯ ನಂತರ ವೀರಾಜಪೇಟೆಗೆ ಪ್ರಥಮ ಬಾರಿಗೆ ಭೇಟಿ ನೀಡಿದ ಶಿವು ಮಾದಪ್ಪ ಅವರು ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ಈ ಬಾರಿ ಪಕ್ಷ ಮಡಿಕೇರಿ ಹಾಗೂ ವೀರಾಜಪೇಟೆ ತಾಲೂಕು ಕ್ಷೇತ್ರಗಳಿಂದ ಇಬ್ಬರು ಶಾಸಕರುಗಳನ್ನು ವಿಧಾನಸಭೆಗೆ ಕಳುಹಿಸಲಿದೆ. ಪಕ್ಷದ ಕಾರ್ಯಕರ್ತರೊಳಗೆ ಯಾವದೇ ಭಿನ್ನಾಭಿಪ್ರಾಯವಿದ್ದರೂ ಅದನ್ನು ಬಗೆಹರಿಸಿಕೊಂಡು, ಬದಿಗೊತ್ತಿ ಪ್ರತಿಯೊಬ್ಬ ಕಾರ್ಯಕರ್ತರು ಶಿಸ್ತನ್ನು ಕಾಪಾಡಿಕೊಂಡು ಪಕ್ಷ ಸಂಘಟನೆಗೆ ದುಡಿಯಬೇಕಾಗಿದೆ. ಸರಕಾರ ವಿಶೇಷ ಪ್ಯಾಕೇಜ್ ಯೋಜನೆಯಲ್ಲಿ ಕೊಡಗಿನ ಜಿಲ್ಲಾ ಪಂಚಾಯಿತಿ

(ಮೊದಲ ಪುಟದಿಂದ) ರಸ್ತೆಗೆ ರೂ. 35ಕೋಟಿ ಅನುದಾನ ನೀಡಿದೆ. ಇದರಲ್ಲಿ ಗ್ರಾಮಾಂತರ ಪ್ರದೇಶದ ರಸ್ತೆಯ ದುರಸ್ತಿ, ಅಭಿವೃದ್ದಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಇದೇ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಅಬ್ದುಲ್ ಲತೀಫ್, ಚೆನ್ನನಕೋಟೆ ಕ್ಷೇತ್ರದ ಸದಸ್ಯೆ ಲೀಲಾವತಿ, ತಾಲೂಕು ಪಂಚಾಯಿತಿ ಸದಸ್ಯ ಮಾಳೇಟಿರ ಪ್ರಶಾಂತ್, ಆರ್.ಎಂ.ಸಿ ಸದಸ್ಯ ಮಾಳೇಟಿರ ಬೋಪಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಅಬ್ದುಲ್‍ಸಲಾಂ, ನಗರ ಸಮಿತಿ ಅಧ್ಯಕ್ಷ ಜಿ.ಜಿ.ಮೋಹನ್, ಕಾರ್ಯದರ್ಶಿ ಎಂ.ಎಂ.ಶಶಿಧರನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಸ್.ವೆಂಕಟೇಶ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿನಿತಾ ಕಾವೇರಮ್ಮ, ಜಿಲ್ಲಾ ಸೇವಾದಳದ ಚಿಲ್ಲವಂಡ ಕಾವೇರಪ್ಪ, ನಗರ ಸೇವಾದಳದ ಎಂ.ಎಲ್.ಸೈನುದ್ದೀನ್, ಪಟ್ಟಣ ಪಂಚಾಯಿತಿ ನಾಮಕರಣ ಸದಸ್ಯ ಮಹಮ್ಮದ್ ರಾಫಿ, ಪಕ್ಷದ ವಕ್ತಾರ ಎಂ.ಎಸ್. ಪೂವಯ್ಯ, ಮಾಳೇಟಿರ ಬೆಲ್ಲು ಬೋಪಯ್ಯ, ಏಜಾಜ್ ಅಹಮ್ಮದ್ ಮತ್ತಿತರರು ಹಾಜರಿದ್ದರು.

ಪಕ್ಷದ ಕಾರ್ಯಕರ್ತರು ಶಿವು ಮಾದಪ್ಪ ಅವರನ್ನು ಇಲ್ಲಿನ ಪಂಜರ್‍ಪೇಟೆಯ ಗೇಟ್‍ನ ಬಳಿ ಸ್ವಾಗತಿಸಿದರು.