*ಗೋಣಿಕೊಪ್ಪಲು, ಜು. 4: ಕಸ್ತೂರಿ ರಂಗನ್ ವರದಿಯಿಂದ ಮರಳು ಗಣಿಗಾರಿಕೆ, ಮರ ಹನನಗಳಿಗೆ ಸಮಸ್ಯೆಯಾಗುತ್ತದೆಯೇ ಹೊರತು ಸಾಮಾನ್ಯ ಜನರು ವರದಿಯ ಬಗ್ಗೆ ಭಯ ಪಡುವದು ಬೇಡ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪಡ್ದಲೆ ಪುತ್ತು ಭಗವತಿ ದೇವಸ್ಥಾನಕ್ಕೆ ತೆರಳುವ ಆರೂವರೆ ಕಿ.ಮೀ. ರಸ್ತೆಯನ್ನು ರೂ. 6.52 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕಸ್ತೂರಿ ರಂಗನ್ ವರದಿಯ ಸಾಧಕ ಬಾಧಕಗಳ ಬಗ್ಗೆ ಕಾಂಗ್ರೆಸ್ ಸರಕಾರ ಕೇಂದ್ರಕ್ಕೆ ಸಮರ್ಪಕ ವರದಿ ಸಲ್ಲಿಸದೇ ಇರುವದರಿಂದ ಕೇಂದ್ರ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಕಸ್ತೂರಿ ರಂಗನ್ ವರದಿಯಿಂದ ನಿತ್ಯ ಚಟುವಟಿಕೆಗಳಿಗೆ ಸಮಸ್ಯೆ ಉಂಟಾಗದು ಎಂದರು. ಕೇಂದ್ರದ ವಿವಿಧ ಯೋಜನೆಗಳ ಅನುದಾನದಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಉಸಿರಾಡುತ್ತಿದೆ. ಬಡವರ ಅಭಿವೃದ್ಧಿಗೆ ಚಿಂತನೆ ಹರಿಸದೆ ಮುಖ್ಯ ಮಂತ್ರಿ ಜಾತಿ ಆಧಾರದಲ್ಲಿ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಂಡಿದೆ. ಈ ಭಯದಲ್ಲಿ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಎಂದರು. ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ವಾಜಪೇಯಿ ಅವರ ಕನಸು ಗ್ರಾಮದ ರಸ್ತೆಗಳ ಅಭಿವೃದ್ಧಿಯಿಂದ ನನಸಾಗುತ್ತಿದೆ. ಕೇಂದ್ರ ಸರಕಾರದ ಉತ್ತಮ ಆಡಳಿತದಿಂದ ಬಡವರಿಗೆ ಹಲವು ಸೌಲಭ್ಯಗಳು ದೊರಕುವಂತಾಗಿದೆ. ರೈತರಿಗೆ ಕಡಿಮೆ ದರದಲ್ಲಿ ಗೊಬ್ಬರ ದೊರಕುತ್ತಿದೆ. ಜಿ.ಎಸ್.ಟಿ. ಏಕ ತೆರಿಗೆ ನಿಯಮ ಬಂದರೂ ಗೊಬ್ಬರÀಕ್ಕೆ ಹೆಚ್ಚು ಹಣ ನಿಗದಿ ಮಾಡದೆ ರೈತರ ಭಾರ ಇಳಿಸಿದೆ ಎಂದರು.

ಬಿ.ಜೆ.ಪಿ. ಸರಕಾರದ ಆಡಳಿತದಲ್ಲಿ ಜಿಲ್ಲೆ ಬಹಳಷ್ಟು ಅಭಿವೃದ್ಧಿ ಕಂಡಿದೆ. ಇದನ್ನು ಅರಿತು ಕೊಳ್ಳದ ಕೆಲವರು ಅಪಪ್ರಚಾರದಲ್ಲಿ ತೊಡಗಿಸಿಕೊಂಡು ಸಂಸದರ ರಾಜೀನಾಮೆ ಕೇಳುತ್ತಿರುವದು ನ್ಯಾಯವಲ್ಲ ಎಂದು ಹೇಳಿದರು. ತಾ.ಪಂ. ಅಧ್ಯಕ್ಷೆ ಸ್ಮೀತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಜಿ.ಪಂ. ಸದಸ್ಯೆ ಅಪ್ಪಂಡೇರಂಡ ಭವ್ಯ, ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ತಂಬಿ ನಾಣಯ್ಯ, ಬಿ. ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಸುಮಂತ್, ಕಾಫಿ ಬೋರ್ಡ್ ಸದಸ್ಯೆ, ಬೊಟ್ಟಂಗಡ ರಾಜು, ಬಿರುನಾಣಿ ಸ್ಥಾನೀಯ ಸಮಿತಿ ಅಧ್ಯಕ್ಷ ರಾಯ್ ಚಿಣ್ಣಪ್ಪ, ಬಿ.ಜೆ.ಪಿ. ತಾಲೂಕು ಅಧಕ್ಷ ಕುಂಞಂಗಡ ಅರುಣ್ ಭೀಮಯ್ಯ, ತಾಲೂಕು ಫೆಡರಲ್ ಉಪಾಧ್ಯಕ್ಷ ಮಲ್ಲಂಡ ಮಧು ದೇವಯ್ಯ, ತಹಶೀಲ್ದಾರ್ ಗೋವಿಂದರಾಜು, ಇಂಜಿನಿಯರ್ ರಾಮರೆಡ್ಡಿ, ತಾ.ಪಂ. ಮಾಜಿ ಸದಸ್ಯೆ ಊರ್ಮಿಳಾ ಉಪಸ್ಥಿತರಿದ್ದರು.

- ಎನ್.ಎನ್. ದಿನೇಶ್