ಸುಂಟಿಕೊಪ್ಪ, ಜು. 6: ಕಂಬಿಬಾಣೆ ಗ್ರಾಮ ಪಂಚಾಯಿತಿಯ ಅತ್ತೂರು ನಲ್ಲೂರು ಪೂಜಾ ಎಸ್ಟೇಟ್ ಮತ್ತು ಕೊಡಗರಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಚೌಡಿಕಾಡು ತೋಟಕ್ಕೆ ಕಾಡಾನೆಗಳ ಧಾಳಿಯಿಂದ ಅಪಾರ ಬೆಳೆ ನಷ್ಟವಾಗಿದೆ.ಹಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ಕಾಫಿ, ಕರಿಮೆಣಸು, ಬಾಳೆ ತೋಟಗಳನ್ನು ಧ್ವಂಸಗೊಳಿಸಿ ಎಂದು ತೋಟದ ಮಾಲೀಕ ಹರೀಶ್ ಪೈ ಹೇಳಿದ್ದಾರೆ

ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಬಾಳೆ, ತೆಂಗು, ಮಾವು, ಕಾಫಿ, ಮೆಣಸು ಗಿಡಗಳನ್ನು ಧÀ್ವಂಸಗೊಳಿಸಿದ್ದು, ಅಂದಾಜು ರೂ. 30,000 ದಷ್ಟು ನಷ್ಟ ಸಂಭವಿಸಿದೆ ಎಂದು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಅಲ್ಲದೆ ಕಂಬಿಬಾಣೆ ಗ್ರಾಮ ಪಂಚಾಯಿತಿಗೆ ಸೇರಿದ ಅತ್ತೂರು ನಲ್ಲೂರು ಪೂಜಾ ಎಸ್ಟೇಟ್‍ನ ರೋಬೆಸ್ಟಾ ಮತ್ತು ಅರೇಬಿಕಾ ಕಾಫಿ ಗಿಡಗಳನ್ನು ಧ್ವಂಸಗೊಳಿಸಿದ್ದು, ಸುಮಾರು 20 ಸಾವಿರದಷ್ಟು ನಷ್ಟ ಸಂಭವಿಸಿದೆ ಎಂದು ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ನಿರಂತರವಾಗಿ ತೋಟಗಳಲ್ಲಿ ಹಗಲು ವೇಳೆಯಲ್ಲಿಯೇ ಆನೆಗಳು ಕಂಡು ಬರುತ್ತಿದ್ದು, ಕೂಲಿ ಕಾರ್ಮಿಕರು ತೋಟದ ಕೆಲಸಕ್ಕೆ ಬರಲು ಅಂಜುತ್ತಿದ್ದು, ಸಾರ್ವಜನಿಕರು ಮನೆಯಿಂದ ಹೊರ ಬರುವದಕ್ಕೂ ಭಯ ಪಡುತ್ತಿದ್ದಾರೆ.

ಕೂಡಲೇ ಅರಣ್ಯ ಅಧಿಕಾರಿಗಳು ಕಾಡಾನೆಗಳನ್ನು ಓಡಿಸುವಂತೆ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.