ಶನಿವಾರಸಂತೆ : ಬೆಳೆಗಾರರ ನೆಮ್ಮದಿ ಕೆಡಿಸಿರುವ ಕಾಫಿ ತೋಟಗಳಲ್ಲಿ ಕಂಡು ಬರುತ್ತಿರುವ ಶಂಕುಹುಳು ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಪ್ರಯತ್ನ ನಡೆದಿದೆ ಎಂದು ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್ ತಿಳಿಸಿದ್ದಾರೆ.ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾರಳ್ಳಿ, ಹಂಡ್ಲಿ, ಕೆರಳ್ಳಿ, ಶಿರಂಗಾಲ ಗ್ರಾಮಗಳ 250 ಎಕರೆ ಕಾಫಿ ತೋಟಗಳಲ್ಲಿ ವ್ಯಾಪಿಸಿರುವ ಶಂಕುಹುಳು ಹಾಗೂ ಕಾಂಡಕೊರಕ ಹುಳುಗಳನ್ನು ಪರಿಶೀಲಿಸಿದ ಬಳಿಕ ಶನಿವಾರಸಂತೆಯ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಹೋಬಳಿ ಕಾಫಿ ಬೆಳೆಗಾರರ ಸಂಘದ ವತಿಯಿಂದ ನಡೆದ ಕಾಫಿ ತೋಟಗಳಲ್ಲಿ ಶಂಕುಹುಳುಗಳ ಬಾಧೆ ಹಾಗೂ ಕಾಂಡಕೊರಕ ಸಮಸ್ಯೆ ಕುರಿತ ಸಮಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಶಂಕುಹುಳು ಮಂಡ್ಯ ಜಿಲ್ಲೆಯಿಂದ ಬಂದಿದ್ದು ನಿವಾರಣೆ ಬಗ್ಗೆ ಅಲ್ಲಿಯೇ ತಿಳಿದುಕೊಳ್ಳಬೇಕು. ಸಂಶೋಧನಾ ಕೇಂದ್ರದ ತಂಡದ ಜತೆಯಿದ್ದು 10 ದಿನಗಳೊಳಗೆ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸಲಾಗುವದು ಔಷಧಿ ಕಂಡು ಹಿಡಿಯಲಾಗುವದು ಎಂದರು.

ಚೆಟ್ಟಳ್ಳಿಯ ಕಾಫಿ ಉಪ ಸಂಶೋಧನಾ ಕೇಂದ್ರದ ಕೀಟ ವಿಜ್ಞಾನಿ ಡಾ: ಕುರಿಯನ್ ಮಾತನಾಡಿ, ಜಿಲ್ಲಾಧಿಕಾರಿ ಅವರಿಗೆ ಸಂಪೂರ್ಣ ಅಧಿಕಾರವಿದ್ದು ಅವರು ಕಾಫಿ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿ ಬೆಳೆಗಾರರ ಸಮಸ್ಯೆ ಪರಿಹರಿಸಬೇಕು ಎಂದರು.

ಸಂಶೋಧನಾ ಕೇಂದ್ರದ ಉಪ ನಿರ್ದೇಶಕ ಡಾ. ಜಗದೀಶನ್ ಮಾತನಾಡಿ, ಸರ್ಕಾರದ ಸಹಕಾರದೊಂದಿಗೆ ಸಂಶೋಧನಾ ಕೇಂದ್ರ ಹಾಗೂ ಕಾಫಿ ಮಂಡಳಿ ಶಂಕುಹುಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತದೆ ಎಂದರು. ಕಾಫಿ ಮಂಡಳಿ ಸದಸ್ಯ ನಾಗರಾಜ್ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಆರ್ ಪಿ ಲಕ್ಷಣ್ ಮಾತನಾಡಿದರು.

ಸಂಶೋಧನಾ ಕೇಂದ್ರದ ಕೀಟ ವಿಜ್ಞಾನಿ ಡಾ ರಂಜಿತ್, ಶನಿವಾರಸಂತೆ ಕಾಫಿ ಮಂಡಳಿ ಕಿರಿಯ ಸಂಪರ್ಕಾಧಿಕಾರಿ ಎಮಿ, ಸಿಬ್ಬಂದಿ ಶ್ರೀಜಿತ್ ಬೆಳೆಗಾರ ಸಂಘದ ನಿರ್ಧೇಶಕರು, ಸದಸ್ಯರು, ಬೆಳೆಗಾರರು ಉಪಸ್ಥಿತರಿದ್ದರು. ಸಂಘದ ಜಿ. ಎಂ ಹೂವಯ್ಯಾ ಸ್ವಾಗತಿಸಿ, ಮಹಮ್ಮದ್ ಪಾಶ ವಂದಿಸಿದರು.ಪಂಚಾಯಿತಿ ವ್ಯಾಪ್ತಿಯ 250ಕ್ಕೂ ಅಧಿಕ ಏಕರೆ ಕೃಷಿ ಪ್ರದೇಶ ಈ ಹುಳುವಿನ ಬಾಧೆಗೆ ಒಳಗಾಗಿದೆ. ಕಳೆದ 2016ರಲ್ಲಿ ಸುಮಾರು 50 ಏಕರೆ ಪ್ರದೇಶಕ್ಕೆ ವ್ಯಾಪಿಸಿದ ಹುಳುಗಳ ಹಾವಳಿ ಇಂದು 250 ಏಕರೆಗೆ ವಿಸ್ತರಿಸಿದೆ. ಒಂದು ಹುಳು ಸಾಮಾನ್ಯವಾಗಿ 300ರಿಂದ 400 ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತವೆ. ಗಂಡು ಹಾಗೂ ಹೆಣ್ಣಿನ ಅಂಶಗಳು ಒಂದೇ ಹುಳದಲ್ಲಿ ಕಾಣಸಿಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

ಇವುಗಳ ಸಂತಾನೋತ್ಪತ್ತಿಯೂ ಶೀಘ್ರವಾಗಿದ್ದು, ಹುಳುಗಳನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ. ಇದಕ್ಕೆ ಪರಿಹಾರ ಒಂದೇ ‘ಕ್ಯಾಚ್ ಅಂಡ್ ಕಿಲ್’! ಎಲ್ಲಾ ಹುಳುಗಳನ್ನು ಹಿಡಿದು ನಂತರ ಸಾಯಿಸುವದೇ ಇದಕ್ಕೆ ಉಳಿದಿರುವ ಪರಿಹಾರ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

ಇವುಗಳು ಸಾಮಾನ್ಯವಾಗಿ ಅತ್ಯಧಿಕ ಸಂಖ್ಯೆಯಲ್ಲಿ ಹಾನಿ ಮಾಡುವದರಿಂದ, ಈ ಹುಳುಗಳು ಕಂಡ ಕೂಡಲೆ ಹತೋಟಿ ಕ್ರಮಗಳನ್ನು ಕೈಗೊಳ್ಳಬೇಕು. ಆರಂಭದಲ್ಲೇ ಈ ಹುಳುಗಳನ್ನು ಸಂಗ್ರಹಿಸಿ ನಾಶಪಡಿಸುವದು ಹಾಗೂ ಹುಳುವಿನ ಅಡಗು ತಾಣಗಳನ್ನು ನಾಶಪಡಿಸುವದು. ಹುಳುಗಳನ್ನು ಆಕರ್ಷಿಸಲು ಪಪ್ಪಾಯ ಗಿಡದ ಕಾಂಡಗಳು, ತೇವವಾದ ಗೋಣಿ ಚೀಲಗಳು ಹಾಗೂ ಪಪ್ಪಾಯ ಎಲೆಗಳನ್ನು ಬಳಸಿ ಹುಳುಗಳನ್ನು ಸಂಗ್ರಹಿಸಬೇಕೆಂದು ಕಾಫಿ ಮಂಡಳಿಯ ಅಧಿಕಾರಿಗಳು ಬೆಳೆಗಾರರಿಗೆ ಮಾಹಿತಿ ಒದಗಿಸಿದ್ದಾರೆ.

ಶಂಕುಹುಳು ಪೀಡಿತ ಪ್ರದೇಶಗಳಲ್ಲಿ ಚಿಪ್ಪಿನ ಸುಣ್ಣವನ್ನು ಹರಡಬೇಕು. 50 ಲೀ. ನೀರಿನಲ್ಲಿ 2 ಕೆ.ಜಿ. ಮೈಲುತುತ್ತ ಮತ್ತು 2 ಕೆ.ಜಿ. ತಂಬಾಕಿನ ಸಾರವನ್ನು ಮಿಶ್ರ ಮಾಡಿ ಹುಳುಗಳ ಮೇಲೆ ಸಿಂಪಡಿಸಬೇಕು. ಅಥವಾ 5% ಮೆಟಾಲ್ಡಿಹೈಡ್ ಗುಳಿಗೆಗಳನ್ನು ಎಕರೆಗೆ 10 ಕೆ.ಜಿ. ಗಿಡಗಳ ಸುತ್ತ ಹರಡಬೇಕು. ಸಂಗ್ರಹಿಸಿದ ಹುಳುಗಳನ್ನು 7 ಅಡಿ ಆಳ, 4 ಅಡಿ ಅಗಲ ಮತ್ತು 4 ಅಡಿ ಉದ್ದದ ಗುಂಡಿಗಳಲ್ಲಿ ತುಂಬಿಸಿ, ಪ್ರತಿ ಒಂದು ಅಡಿ ಪದರದ ಮೇಲೆ ಚಿಪ್ಪಿನ ಸುಣ್ಣ ಹಾಗೂ ಉಪ್ಪು ಹರಡಬೇಕು. ಆರು ಅಡಿ ನಂತರ ಮತ್ತೆ ಚಿಪ್ಪಿನ ಸುಣ್ಣ ಹಾಗು ಬ್ಲೀಚಿಂಗ್ ಪೌಡರ್ ಹರಡಿ ಗುಂಡಿಯನ್ನು ಮಣ್ಣಿನಿಂದ ಮುಚ್ಚಬೇಕು ಎಂದು ನಿಯಂತ್ರಣ ಕ್ರಮಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಬೆಳ್ಳಾರಳ್ಳಿ, ಹಂಡ್ಲಿ ಭಾಗದ ರೈತರು ಹತಾಶೆಗೆ ಒಳಗಾಗಿದ್ದಾರೆ. ಹುಳುಗಳ ನಿಯಂತ್ರಣ ಸಾಧ್ಯವಾಗದೇ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ದಿನಕ್ಕೆ ಟನ್ ಗಟ್ಟಲೆ ಹುಳುಗಳನ್ನು ಸಂಗ್ರಹಿಸಿ ನಾಶ ಪಡಿಸುತ್ತಿದ್ದರೂ ಸಹ ಸಂಪೂರ್ಣ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಬೆಳೆಗಾರರ ಬದುಕು ಇನ್ನಷ್ಟು ಅತಂತ್ರವಾಗುವದರಲ್ಲಿ ಸಂಶಯವೇ ಇಲ್ಲ.

ಕೇವಲ ಕೃಷಿಗೆ ಮಾತ್ರ ಹಾನಿ ಮಾಡದೇ ಈ ಹುಳುಗಳು ಮಾನವನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಿಸಿರುವ ತಜ್ಞರು, ಮಾನವನ ದೇಹ ಹಾಗೂ ಉಸಿರಾಟದ ಮೇಲೂ ಇವುಗಳು ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಬೆಳೆಗಾರರ ಸಂಕಷ್ಟವನ್ನು ಅರಿಯಲು ಸ್ವತಃ ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಕಾಫಿ ಮಂಡಳಿಯ ರಾಜ್ಯ ಉಪಾಧ್ಯಕ್ಷೆಯೂ ಆಗಿರುವ ರೀನಾ ಪ್ರಕಾಶ್ ನೇತೃತ್ವದಲ್ಲಿ ಸದಸ್ಯ ಜಿ.ಎಲ್. ನಾಗರಾಜ್ ಅವರನ್ನು ಒಳಗೊಂಡ ತಂಡ, ವಸ್ತುಸ್ಥಿತಿಯನ್ನು ಕಂಡು ನಿಬ್ಬೆರಗಾಗಿದೆ. ರೈತರ ಸಂಕಷ್ಟವನ್ನು ಆಲಿಸಿದ ರೀನಾ ಪ್ರಕಾಶ್ ಅವರು ತಕ್ಷಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಕ್ತ ಮಾರ್ಗದರ್ಶನ ಒದಗಿಸುವಂತೆ ಕಾಫಿ ಮಂಡಳಿಯ ತಜ್ಞರಿಗೆ ಸೂಚಿಸಿದ್ದಾರೆ.

ತಂಡದ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಶನಿವಾರಸಂತೆ ಹೋಬಳಿ ಬೆಳೆಗಾರರ ಸಮಿತಿಯ ಅಧ್ಯಕ್ಷ ಆರ್.ಪಿ. ಲಕ್ಷ್ಮಣ್, ಕಾರ್ಯದರ್ಶಿ ಮಂದೇಗೌಡ, ಖಜಾಂಚಿ ರಂಗಸ್ವಾಮಿ ಸೇರಿದಂತೆ ಇತರರು ಬೆಳೆಗಾರರ ಸಂಕಷ್ಟಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಬೆಳ್ಳಾರಳ್ಳಿ ಗ್ರಾಮದ ಶಿವಶೇಖರಯ್ಯ, ಪ್ರದೀಪ್ ಅವರಿಗೆ ಸೇರಿದ ಹತ್ತಾರು ಏಕರೆ ಕಾಫಿ ತೋಟ, ಗದ್ದೆ ಸೇರಿದಂತೆ ಕೃಷಿ ಪ್ರದೇಶದಲ್ಲಿ ಹುಳುಗಳು ಕಂಡುಬಂದಿದ್ದು, ಈಗಾಗಲೇ ಹುಳುಗಳ ನಿಯಂತ್ರಣಕ್ಕಾಗಿ ರೂ. 12 ಲಕ್ಷದಷ್ಟು ಖರ್ಚಾಗಿದೆ. 30 ಸಾವಿರ ನರ್ಸರಿ ಗಿಡಗಳು ಹುಳುವಿಗೆ ಆಹಾರವಾಗಿದೆ ಎಂದು ಪರಿಸ್ಥಿತಿಯ ಗಂಭೀರತೆಯನ್ನು ಬಿಚ್ಚಿಟ್ಟರು.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್ ಅವರು, ಆಫ್ರಿಕನ್ ದೈತ್ಯ ಶಂಕು ಹುಳುವಿನ ಬಾಧೆಯ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಇಲ್ಲಿನ ಪರಿಸ್ಥಿತಿ ಕಂಡು ಆತಂಕ ಇಮ್ಮಡಿಸಿದ್ದು, ಇದರ ನಿಯಂತ್ರಣ ಮಂದಗತಿಯಾದರೆ ಮುಂದಿನ ಕೆಲವೇ ವರ್ಷಗಳಲ್ಲಿ ಇಡೀ ಕೊಡಗಿನ ಕೃಷಿ ನಾಶವಾಗಲಿದೆ. ವರ್ಷದಿಂದ ವರ್ಷಕ್ಕೆ ಹುಳುಗಳು ತಮ್ಮ ವಿಸ್ತಾರವನ್ನು ವೃದ್ಧಿಸಿಕೊಳ್ಳುತ್ತಿದ್ದು, ಕೊಡ್ಲಿಪೇಟೆಯಿಂದ ದಕ್ಷಿಣ ಕೊಡಗಿನ ಕುಟ್ಟದವರೆಗೂ ವ್ಯಾಪಿಸುವದರಲ್ಲಿ ಸಂಶಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಬೆಳ್ಳಾರಳ್ಳಿ ಗ್ರಾಮದ ಮಂಜು ಅವರು ಗದ್ದೆಯಲ್ಲಿ ಬೆಳೆದಿದ್ದ ಶುಂಠಿ ಬೆಳೆ ಸಂಪೂರ್ಣ ನಾಶವಾಗಿದೆ. ಬೆಳೆಗಾರರು ದಿನನಿತ್ಯ ಆತಂಕದ ಕ್ಷಣಗಳನ್ನೇ ಎದುರಿಸುತ್ತಿದ್ದಾರೆ. ಕೃಷಿ ಕಾರ್ಯ ಬಿಟ್ಟು ಹುಳುಗಳನ್ನು ಸಂಗ್ರಹಿಸುವದೇ ಕಾಯಕವಾಗಿದೆ. ಬೆಳೆಗಾರರ ಸಮಸ್ಯೆಗೆ ಕಾಫಿ ಮಂಡಳಿಯೂ ಸ್ಪಂದಿಸಲಿದ್ದು, ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವದು ಎಂದು ತಿಳಿಸಿದರು.

ರೀನಾ ಪ್ರಕಾಶ್ ಅವರೊಂದಿಗಿದ್ದ ಕಾಫಿ ಮಂಡಳಿಯ ತಜ್ಞರಾದ ಕುರಿಯನ್ ಮತ್ತು ಜಗದೀಶ್ ಸೇರಿದಂತೆ ಇತರ ಅಧಿಕಾರಿಗಳು, ಕೇವಲ ಕಾಫಿ ಮಂಡಳಿಯಿಂದ ಮಾತ್ರ ಹುಳುಗಳ ನಿಯಂತ್ರಣ ಸಾಧ್ಯವಿಲ್ಲ. ನಮ್ಮೊಂದಿಗೆ ಸರ್ಕಾರದ ಇತರ ಇಲಾಖೆಗಳೂ ಕೈಜೋಡಿಸಬೇಕು. ಕ್ಯಾಚ್ ಅಂಡ್ ಕಿಲ್ ಕ್ರಮ ಮಾತ್ರ ಹುಳುಗಳ ನಿಯಂತ್ರಣಕ್ಕೆ ಮಾರ್ಗವಾಗಿದ್ದು, ಈ ನಿಟ್ಟಿನಲ್ಲಿ ಸ್ಥಳೀಯರೂ ಕೈಜೋಡಿಸಬೇಕು ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಶನಿವಾರಸಂತೆ ಹೋಬಳಿ ಬೆಳೆಗಾರರ ಸಂಘದ ಖಜಾಂಚಿ ರಂಗಸ್ವಾಮಿ ಪತ್ರಿಕೆಯೊಂದಿಗೆ ಮಾತನಾಡಿ, ಬೆಳ್ಳಾರಳ್ಳಿ, ಹಂಡ್ಲಿ, ಬೆಟ್ಟದಳ್ಳಿ, ಬೀಕಳ್ಳಿ ಭಾಗದಲ್ಲಿ ಹುಳುಗಳು ಕಂಡುಬರುತ್ತಿದ್ದು, ಇವುಗಳು ನಿಯಂತ್ರಣಕ್ಕೆ ಬಾರದಿದ್ದರೆ ಮುಂದಿನ 4 ವರ್ಷದಲ್ಲಿ ಈ ಭಾಗದ ಬೆಳೆಗಾರರು ಸಾಯುವ ಸ್ಥಿತಿ ನಿರ್ಮಾಣವಾಗಲಿದೆ. ಚೆಂಡು ಹೂವನ್ನೂ ಬಿಡದೇ ತಿನ್ನುತ್ತಿರುವ ಹುಳುಗಳು, ಬೆಳೆಗಾರರ ಬದುಕನ್ನೇ ಕೊರೆಯುತ್ತಿದೆ ಎಂದು ಪರಿಸ್ಥಿತಿಯ ಭೀಕರತೆಯನ್ನು ಬಿಚ್ಚಿಟ್ಟರು.

ಈ ಹಿಂದೆ ಬೋರರ್ ನಿಯಂತ್ರಣಕ್ಕೆ ಅಳವಡಿಸಿದ್ದ ಕ್ರಮವನ್ನೇ ಈಗಲೂ ಅಳವಡಿಸಿಕೊಳ್ಳಬೇಕಿದೆ. ಒಂದು ಹುಳುವಿಗೆ ಇಂತಿಷ್ಟು ಹಣ ಎಂದು ಘೋಷಿಸಿ, ಹುಳುಗಳನ್ನು ಸಂಗ್ರಹಿಸಿ ಸಾಮೂಹಿಕವಾಗಿ ನಿರ್ನಾಮ ಮಾಡಬೇಕಿದೆ. ತಪ್ಪಿದಲ್ಲಿ