ಸೋಮವಾರಪೇಟೆ, ಜು. 5: ತಾಲೂಕು ಪತ್ರಕರ್ತರ ಸಂಘದ ವತಿಯಿಂದ ತಾಲೂಕಿನ ಪತ್ರಕರ್ತರಿಗೆ ವರ್ಷಂಪ್ರತಿ ನೀಡುವ ವಾರ್ಷಿಕ ಪ್ರಶಸ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿಯಾದ ಬಿ.ಎ. ಭಾಸ್ಕರ್ ತಿಳಿಸಿದ್ದಾರೆ.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ತಂದೆ-ತಾಯಿಯವರಾದ ತೇಲಪಂಡ ಸೋಮಣ್ಣ ಮತ್ತು ಶಾರದ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿ, ರಾಜ್ಯ ಪತ್ರಕರ್ತರ ಸಂಘದ ನಿರ್ದೇಶಕ ಎಸ್.ಎ. ಮುರಳೀಧರ್ ತಮ್ಮ ಸಹೋದರ ಎಸ್.ಎ. ಗಣೇಶ್ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿ, ಶನಿವಾರಸಂತೆ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್ ಕುಮಾರ್ ತಮ್ಮ ತಂದೆ ಹೆಚ್. ರಾಮೇಗೌಡ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿಗೆ ವರದಿ ಆಹ್ವಾನಿಸಲಾಗಿದೆ.

ಇದರೊಂದಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಲೋಕೇಶ್ ಸಾಗರ್ ತಂದೆ-ತಾಯಿಯವರಾದ ಬಿ.ಕೆ. ಸುಬ್ಬಯ್ಯ ಮತ್ತು ಜಯಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಅರಣ್ಯ, ಪರಿಸರ ಮತ್ತು ವನ್ಯಜೀವಿ ಪ್ರಶಸ್ತಿ, ಕುಶಾಲನಗರ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ತಮ್ಮ ತಂದೆ-ತಾಯಿಯವರಾದ ಎಂ. ನಾರಾಯಣ ಮತ್ತು ಎನ್. ಪದ್ಮಾವತಿ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ತಾಲೂಕಿನ ಪತ್ರಕರ್ತರ ಸಂಘದ ಸದಸ್ಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

2016 ಜನವರಿಯಿಂದ ಡಿಸೆಂಬರ್ 31 ರವರೆಗೆ ಪ್ರಕಟವಾಗಿರುವ ವರದಿ ಮತ್ತು ಲೇಖನಗಳನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಗುವದು. ವರದಿಯ ಮೂಲಪ್ರತಿ ಅಥವಾ ನಕಲು ಪ್ರತಿಯನ್ನು ಕಡ್ಡಾಯವಾಗಿ ಮೂರು ಪ್ರತಿಗಳಲ್ಲಿ ಸಲ್ಲಿಸಬೇಕು. ವರದಿ, ಲೇಖನಗಳಲ್ಲಿ ವರದಿಗಾರರ ಹೆಸರು ಇಲ್ಲದಿದ್ದ ಪಕ್ಷದಲ್ಲಿ ಆಯಾ ಪತ್ರಿಕೆಗಳ ಸಂಪಾದಕರ ದೃಢೀಕರಣ ಪತ್ರ ಲಗತ್ತಿಸಬೇಕು.

ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯತ್ವವನ್ನು ಪಡೆದಿರುವ ತಾಲೂಕಿನ ವರದಿಗಾರರು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ವರದಿಗಳನ್ನು ತಾ. 10 ರೊಳಗಾಗಿ ಬಿ.ಎ. ಭಾಸ್ಕರ್, ಪ್ರಧಾನ ಕಾರ್ಯದರ್ಶಿ, ತಾಲೂಕು ಪತ್ರಕರ್ತರ ಸಂಘ, ಪತ್ರಿಕಾಭವನ, ಸೋಮವಾರ ಪೇಟೆ ಇಲ್ಲಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 9448325945, 9972717450ನ್ನು ಸಂಪರ್ಕಿಸಬಹುದಾಗಿದೆ.