ಪೊನ್ನಂಪೇಟೆ, ಜು. 6: ಉದ್ಯೋಗ ನಿಮಿತ್ತ ಅರಬ್ಬಿ ರಾಷ್ಟ್ರವಾದ ದುಬೈಯಲ್ಲಿ ನೆಲೆಸಿರುವ ಕೊಡಗಿನ ನಿವಾಸಿಗಳು ಒಂದೆಡೆ ಸೇರಿ ರಂಜಾನ್ ಹಬ್ಬಾಚರಣೆಯ ಅಂಗವಾಗಿ ಈದ್ ಮೀಟ್ ಕೊಡಗು ಕ್ರೀಡಾ ದಿನವನ್ನು ಆಚರಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ತಾಯ್ನಾಡಿನ ಜನರು ಜಾತಿ ಧರ್ಮದ ಬೇದವಿಲ್ಲದೆ ಒಂದೆಡೆ ಸೇರಿ ತಮ್ಮ ಬಾಂಧವ್ಯವನ್ನು ವೃದ್ದಿಸಿಕೊಂಡರು.

ದುಬೈ ಕೂರ್ಗ್ ಸ್ಪೋಟ್ರ್ಸ್ ಕ್ಲಬ್‍ನ ಆಶ್ರಯದಲ್ಲಿ ಯು.ಎ.ಈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ದುಬೈಯ ಶೇಕ್ ಜಾಹೇದ್ ರಸ್ತೆಯಲ್ಲಿರುವ ಅಲ್ಕೂಸ್ ಡೆಲ್ಕೊ ಹೊನಲು ಬೆಳಕಿನ ಮೈದಾನದಲ್ಲಿ ಜರುಗಿದ ‘ಈದ್ ಮೀಟ್ ಕೊಡಗು ಕ್ರೀಡಾ ದಿನ’ ದುಬೈನಲ್ಲಿ ನೆಲೆಸಿರುವ ಕೊಡಗು ಮೂಲದವರನ್ನು ಒಂದೆಡೆ ಸೇರಿಸುವಲ್ಲಿ ಯಶಸ್ವಿಯಾಯಿತು.

ಕ್ರೀಡಾ ದಿನದ ಅಂಗವಾಗಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಡಂಗ ಸಿಟಿ ಬಾಯ್ಸ್ ತಂಡ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡರೆ, ಚಾಮಿಯಾಲದ ಎಸ್. ವೈ.ಸಿ ತಂಡ ರನ್ನರ್ಸ್ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿತು. ಪುಟ್ಬಾಲ್ ಪಂದ್ಯಾವಳಿಯಲ್ಲಿ ಕುಂಜಿಲದ ಫೈನರಿ ಪ್ರೆಂಡ್ಸ್ ತಂಡ ವಿನ್ನರ್ಸ್ ಪ್ರಶಸ್ತಿ ಗೆದ್ದರೆ, ಚೆರಿಯಪರಂಬು ಪ್ರೆಂಡ್ಸ್ ತಂಡ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ವಾಲಿಬಾಲ್ ಪಂದ್ಯಾವಳಿಯಲ್ಲಿ ಗುಂಡಿಗೆರೆ ಪ್ರೆಂಡ್ಸ್ ತಂಡ ಪ್ರಥಮ ಸ್ಥಾನ ಪಡೆದರೆ, ಚೆರಿಯಪರಂಬು ಪ್ರೆಂಡ್ಸ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. 100 ಮೀ. ಓಟದ ಸ್ಪರ್ದೆಯಲ್ಲಿ ಕಡಂಗಡ ಜಲೀಲ್ ಮೊದಲ ಸ್ಥಾನ ಪಡೆದರೆ, ಗುಂಡಿಗೆರೆಯ ಸೂಫಿಯಾನ್ ದ್ವಿತೀಯ ಮತ್ತು ವೀರಾಜಪೇಟೆಯ ನೂರುದ್ದೀನ್ ತೃತೀಯ ಸ್ಥಾನ ಪಡೆದರು. 400 ಮೀ. ಓಟದ ಸ್ಪರ್ಧೆಯಲ್ಲಿ ಕಡಂಗದ ಜಲೀಲ್ ಪ್ರಥಮ, ಹುಂಡಿಗೆರೆಯ ಸುಫಿಯಾನ್ ದ್ವಿತೀಯ ಮತ್ತು ಗುಂಡಿಗೆರೆಯ ಮಹಮ್ಮದಾಲಿ ತೃತೀಯ ಸ್ಥಾನವನ್ನು ಪಡೆದುಕೊಂಡರು.

ಬಳಿಕ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ದುಬೈ ಕೂರ್ಗ್ ಸ್ಪೋಟ್ರ್ಸ್ ಕ್ಲಬ್‍ನ ಪ್ರಮುಖ ಕುಂಜಿಲದ ಕುಡಂಡ ರಫೀಕ್ ಅಲಿ ಮಾತನಾಡಿದರು.

ಬಹುಮಾನ ವಿತರಣಾ ಕಾರ್ಯಕ್ರಮದ ಅದ್ಯಕ್ಷತೆಯನ್ನು ಯು.ಎ.ಈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಹುಸೇನ್ ಸೋಮವಾರಪೇಟೆ ವಹಿಸಿದ್ದರು. ದುಬೈಯ ಪ್ರಮುಖ ಉದ್ಯಮಿ ಖಾಲಿದ್ ಬಿನ್ ಮೊಹಮ್ಮದ್ ಅಲ್ ಮರ್ರಿ, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಕೊಡಗು ಪ್ರತಿನಿಧಿ ಕುಶಾಲನಗರದ ಗಣೇಶ್ ರೈ, ದುಬೈ ಕೊಡಗು-ದ.ಕನ್ನಡ ಗೌಡ ಸಮಾಜದ ಅದ್ಯಕ್ಷರಾದ ಹರೀಶ್ ಕೋಡಿ, ‘ಕನ್ನಡಿಗರು ದುಬೈ’ ಸಂಘದ ಮಾಜಿ ಅಧ್ಯಕ್ಷ ಮಂಡ್ಯದ ಡಾ. ಮಲ್ಲಿಕಾರ್ಜುನ ಗೌಡ, ಯು.ಎ.ಇ.ಯ ‘ಟೀಮ್ ಹಾಕಿ ಕೂರ್ಗ್’ನ ವ್ಯವಸ್ಥಾಪಕ ಪೊನ್ನಿಮಾಡ ಲೋಕೇಶ್ ಕಾರ್ಯಪ್ಪ, ‘ಕನ್ನಡಿಗರು ದುಬೈ’ ಸಂಘದ ಅಧ್ಯಕ್ಷರಾದ ವೀರೇಂದ್ರ ಬಾಬು, ಉದ್ಯಮಿ ವಿರಾಜಪೇಟೆಯ ಶಕೀಲ್, ಮಡಿಕೇರಿಯ ಆರೀಪ್, ಗೋಣಿಕೊಪ್ಪದ ಇಬ್ರಾಹಿಂ, ಹಮೀದ್, ಎಮ್ಮೆಮಾಡಿನ ಹಂಝ, ನಾಪೋಕ್ಲುವಿನ ಶ್ಯಾಂ, ಕಡಂಗದ ಮಜೀದ್ ಸಹದಿ, ನಲ್ವತೋಕ್ಲಿನ ದುದ್ದಿಯಂಡ ಜಿಯಾ ಮೊದಲಾದವರು ಭಾಗವಹಿಸಿದ್ದರು.

ಇದಕ್ಕೂ ಮೊದಲು ನಡೆದ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದಲ್ಲಿಯೂ ವಿವಿಧ ಪ್ರಮುಖರು ಭಾಗವಹಿಸಿದ್ದರು.