ಮಡಿಕೇರಿ, ಜು. 6: ಪ್ರಸಕ್ತ ಸಾಲಿನ ಮಳೆ ಅಷ್ಟೊಂದು ರಭಸವಿಲ್ಲ ದಿದ್ದರೂ ಇಂದು ಮುಂಜಾನೆಯೇ ಮನೆಯ ಮೇಲ್ಚಾವಣಿ ಕುಸಿದು ಭಾರೀ ಅನಾಹುತ ವೊಂದು ತಪ್ಪಿದ್ದರೂ ಬಾಲಕಿಗೆ ಸಣ್ಣ ಪುಟ್ಟ ಗಾಯವಾಗಿದೆ.ಮಡಿಕೇರಿ ನಗರದ ರಾಣಿಪೇಟೆ ಸಮೀಪ ಅಂಬೇಡ್ಕರ್ ಬಡಾವಣೆಯ ನಿವಾಸಿ, ಹನುಮಂತ (ಅಪ್ಪಿ) ಎಂಬವರು ತನ್ನ ಪತ್ನಿ ಸಾವಿತ್ರಿ ಹಾಗೂ 7 ವರ್ಷದ ಪುತ್ರಿ ಕೀರ್ತನಳೊಂದಿಗೆ ಮನೆ ಒಳಗಡೆ ನಿದ್ರೆಯಲ್ಲಿರುವಾಗ ಮುಂಜಾನೆ 5.30 ಗಂಟೆ ಸುಮಾರಿಗೆ ಮೇಲ್ಚಾವಣಿ ಧರೆಗುರುಳಿದೆ. ಈ ಸಂದರ್ಭ ಮೇಲ್ಚಾಣಿಯ ಮರದ ತುಂಡು ಬಾಲಕಿಯ ತಲೆಗೆ ಬಿದ್ದು ಗಾಯವಾಗಿದ್ದು, 7 ಹೊಲಿಗೆ ಹಾಕಲಾಗಿದೆ. ಬಾಲಕಿಯ ತಾಯಿಗೂ ತಲೆಗೆ ಸಣ್ಣ ಪೆಟ್ಟಾಗಿದೆ. ನಗರಸಭಾ ಸದಸ್ಯ ಕೆ.ಎಂ. ಗಣೇಶ್ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಕಾಳಜಿ ತೋರಿದರು. ಸ್ಥಳಕ್ಕೆ ನಗರಸಭಾ ಆಯುಕ್ತೆ ಶುಭಾ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಬದಲಿ ವ್ಯವಸ್ಥೆ : ನಗರಸಭಾ ಸದಸ್ಯ ಗಣೇಶ್ ಸೇರಿದಂತೆ ಸ್ಥಳೀಯರು

(ಮೊದಲ ಪುಟದಿಂದ) ಕಾಳಜಿ ವಹಿಸಿ ಕುಸಿದು ಧರೆಗುರುಳಿದ ಮನೆಯನ್ನು ಸಂಪೂರ್ಣ ನೆಲಸಮಗೊಳಿಸಿ ಬೇರೆಡೆ ವ್ಯವಸ್ಥೆ ಕಲ್ಪಿಸಿದರು. ಈ ಸಂದರ್ಭ ಪತ್ರಿಕೆಯೊಂದಿಗೆ ಮಾತನಾಡಿದ ನಗರಸಭಾ ಸದಸ್ಯ ಕೆ.ಎಂ. ಗಣೇಶ್ ದಲಿತ ಸಮುದಾಯಕ್ಕೆ ಸೇರಿದ ಕುಟುಂಬವಾಗಿದ್ದು, ಅವರಿಗೆ ಸರ್ಕಾರದ ಶೇ. 24.10 ರ ಅನುದಾನದಲ್ಲಿ ಮನೆ ನಿರ್ಮಿಸಿಕೊಡುವ ವ್ಯವಸ್ಥೆ ಮಾಡುವದಾಗಿ ತಿಳಿಸಿದರು.

ನಗರಸಭೆ ನಿರ್ಲಕ್ಷ್ಯ

ಮಳೆಗಾಲ ಪ್ರಾರಂಭವಾಗಿದ್ದು, ನಗರಸಭಾ ಆಡಳಿತ ಮಂಡಳಿ ಯಾವದೇ ಪೂರ್ವಸಿದ್ಧತೆ ಮಾಡಿಕೊಂಡಿಲ್ಲ. ನೀರು ಹರಿಯಲು ಚರಂಡಿ ಹಾಗೂ ರಸ್ತೆ ಬದಿಯ ಕಾಡು ಕಡಿಯುವದಕ್ಕೆ ಕ್ರಮಕೈಗೊಳ್ಳುವಂತೆ ಹಲವು ಬಾರಿ ಅಧ್ಯಕ್ಷರ ಗಮನಕ್ಕೆ ತಂದಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಗಣೇಶ್ ಆರೋಪಿಸಿದರು. ನಗರದಾದ್ಯಂತ ಎಲ್ಲಾ ಚರಂಡಿ ದುರಸ್ತಿ ಹಾಗೂ ಕಾಡು ಕಡಿಯುವದಕ್ಕೆ 3 ದಿನಗಳ ಒಳಗೆ ನಗರಸಭೆ ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ನಗರಸಭೆಯ ಮುಂಭಾಗ ಧರಣಿ ಕುಳಿತುಕೊಳ್ಳುವದಾಗಿ ಗಣೇಶ್ ತಿಳಿಸಿದರು.