ಮಡಿಕೇರಿ, ಜು. 6: ಸಮಾಜದ ತಳಹಂತದ ಕಡೆಗಣನೆಗೆ ಒಳಗಾಗಿರುವ ಬಡವರ್ಗದ ಜನಸಮುದಾಯವನ್ನು ಅಭಿವೃದ್ಧಿಯ ಪಥದೆಡೆಗೆ ಕೊಂಡೊಯ್ಯುವ ಮೂಲಕ ಪರಿವರ್ತನೆ ಚಿಂತನೆಗಳಡಿ ಸೇಫ್ ಕರ್ನಾಟಕ ಸಂಘಟನೆಯ ಮೂಲಕ ‘ಬೇರ್‍ಫÀÇಟ್ ಇಂಡಿಯಾ ಕ್ಯಾಂಪೇನ್’ (ಬರಿಗಾಲ ಭಾರತ ಆಂದೋಲನ) ಆರಂಭಿಸುತ್ತಿರುವದಾಗಿ ಸೇಫ್ ಕರ್ನಾಟಕದ ಸ್ಥಾಪಕ ಜೋಯಪ್ಪ ಅಚ್ಚಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇಫ್ ಕರ್ನಾಟಕ ಸಂಘಟನೆ ಬೆಂಗಳೂರು ಮೂಲದಿಂದ ಕಾರ್ಯಾಚರಿಸುತ್ತಿದ್ದು, ಇದರ ಭಾಗವಾದ ಸೇಫ್ ಇಂಡಿಯಾದ ಕಚೇರಿ ದೆಹಲಿಯಲ್ಲಿ ಇದೆ. ಈ ಸಂಘಟನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಸಮಾಜದ ಒಳಿತಿಗೆ ಕಾರಣವಾಗುವ ವಿವಿಧ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವ ಪ್ರಯತ್ನಗಳನ್ನು ನಡೆಸುತ್ತಿರುವದಾಗಿ ಮಾಹಿತಿ ನೀಡಿದರು.
ರಾಜ್ಯ ಮತ್ತು ರಾಷ್ಟ್ರದಲ್ಲಿ ಇಂದಿಗೂ ಕನಿಷ್ಟ ಪಾದರಕ್ಷೆಗಳನ್ನು ಧರಿಸಲಾಗದ ಲಕ್ಷಾಂತರ ಜನರು, ವಿದ್ಯಾರ್ಥಿಗಳು ನಮ್ಮ ನಡುವೆ ಇದ್ದಾರೆ. ಇವರ ಬದುಕಿನಲ್ಲಿ ಬೆಳಕನ್ನು ಮೂಡಿಸುವ ಉದ್ದೇಶದಿಂದ ಸಾಂಕೇತಿಕವಾಗಿ ‘ಬರಿಗಾಲಿನ ಭಾರತ ಆಂದೋಲನ’ವನ್ನು ಪ್ರಸಕ್ತ ಸಾಲಿನ ತಾ. 1 ರಿಂದ ಆರಂಭಿಸಲಾಗಿದ್ದು, ಇದು ಆಗಸ್ಟ್ 8 ರವರೆಗೆ 100 ದಿನಗಳ ಕಾಲ ನಡೆಯಲಿದೆ. ಇದರ ನಡುವೆ ತಾ. 14 ರಿಂದ 21 ರವರೆಗಿನ 8 ದಿನಗಳ ಕಾಲ ಬೆಂಗಳೂರಿನಿಂದ ದೆಹಲಿಯವರೆಗೆ ವಾಹನ ಜಾಥಾವನ್ನು ನಡೆಸುವ ಮೂಲಕ ದೇಣಿಗೆಯನ್ನು ಸಂಗ್ರಹಿಸಿ ಬಡ ಮಂದಿಗೆ ನೆರವಾಗುವ ಕಾರ್ಯ ಕ್ರಮವನ್ನು ಆಯೋಜಿಸಿರುವದಾಗಿ ಜೋಯಪ್ಪ ಅಚ್ಚಯ್ಯ ತಿಳಿಸಿದರು.
ಸಮಾಜದ ಒಳಿತಿನ ಹಿತಚಿಂತನೆಗಳಡಿ ಆರಂಭಿಸಿರುವ ಸೇಫ್ ಕರ್ನಾಟಕ, ಸೇಫ್ ಇಂಡಿಯಾ ಆಂದೋಲನವನ್ನು ಕೊಡಗು ಜಿಲ್ಲೆಯ ಪ್ರವಾಸೋದ್ಯಮ, ಇಲ್ಲಿನ ಕಾಫಿ, ಕರಿಮೆಣಸಿನ ಕೃಷಿಗೆ ಪೂರಕವಾದ ಕಾರ್ಯಕ್ರಮಗಳನ್ನು ಒಳಗೊಳ್ಳುವ ಮೂಲಕ ಆರಂಭಿಸುವ ಉದ್ದೇಶವನ್ನು ಹೊಂದುವದರೊಂದಿಗೆ ಈ ಸಂಬಂಧ ವೆಬ್‍ಸೈಟ್ ಆರಂಭಿಸುವ ಗುರಿಯೂ ಇದೆ. ಕೊಡಗಿನ ಸಂಸ್ಕøತಿಯೊಂದಿಗೆ ಬೆರೆತಿರುವ ಹಾಕಿ ಕ್ರೀಡೆಯನ್ನು ಮತ್ತಷ್ಟು ಪ್ರಚುರ ಪಡಿಸುವ ಉದ್ದೇಶದಿಂದ ಸಂಘಟನೆಯ ಮೂಲಕ ಮುಂದಿನ 2018ನೇ ಸಾಲಿನಲ್ಲಿ ‘ಹಾಕಿ’ ಎನ್ನುವ ಚಲನ ಚಿತ್ರವನ್ನು ಸಜ್ಜುಗೊಳಿಸುವ ಉದ್ದೇಶÀ ಹೊಂದಿರುವದಾಗಿ ಹೇಳಿದರು.
ಸೇಫ್ ಕರ್ನಾಟಕ ಸಂಘಟನೆ ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಡಿಜಿಟಲ್ ಕರ್ನಾಟಕ, ಸ್ಮಾರ್ಟ್ ಸಿಟಿ, ವುಮೆನ್ ಸೇಫ್ಟಿ ಎಸ್‍ಒಎಸ್ ಮೊಬೈಲ್ ಆ್ಯಪ್, ಹೆಣ್ಣು ಮಕ್ಕಳ ರಕ್ಷಣೆ ಮತ್ತು ಶಿಕ್ಷಣದ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಗೋಷ್ಠಿಯಲ್ಲಿ ಸೇಫ್ ಕರ್ನಾಟಕ ಸ್ಥಾಪಕ ಸದಸ್ಯ ಲಿಮ್ ಚಂಗಪ್ಪ, ಬೆಂಗಳೂರು ಸಿಟಿ ಅಧ್ಯಕ್ಷ ವಿಷ್ಣು ಮೇದಪ್ಪ ಹಾಗೂ ಕೊಡಗು ಜಿಲ್ಲಾ ಅಧ್ಯಕ್ಷ ವಿಕಾಸ್ ಉತ್ತಪ್ಪ ಉಪಸ್ಥಿತರಿದ್ದರು.