ಕುಶಾಲನಗರ, ಜು. 5: ಕೊಡಗು ಜಿಲ್ಲೆಯಲ್ಲಿ ಅತಿ ಶೀಘ್ರಗತಿಯಲ್ಲಿ ಬೆಳವಣಿಗೆ ಕಂಡಿರುವ ಕುಶಾಲನಗರ ಪಟ್ಟಣದಲ್ಲಿ ಭೂ ಮಾಫಿಯ ದಂಧೆ ಮಿತಿ ಮೀರಿದ್ದು ಸರಕಾರಕ್ಕೆ ಒಳಪಟ್ಟ ಕೋಟಿಗಟ್ಟಲೆ ರೂಪಾಯಿಗಳ ಬೆಲೆಬಾಳುವ ಭೂಮಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಪರಭಾರೆ ಮಾಡಿಕೊಳ್ಳುವದರೊಂದಿಗೆ ಸರಕಾರದ ಬೊಕಸಕ್ಕೆ ಭಾರೀ ಮೊತ್ತದ ನಷ್ಟ ಉಂಟುಮಾಡಿರುವ ನಿಗೂಢ ಪ್ರಕರಣಗಳು ಬೆಳಕಿಗೆ ಬಂದಿವೆ.

ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯೊಳಗೆ ಅನುಮೋದನೆ ನೀಡಿರುವ ಸುಮಾರು 37 ಬಡಾವಣೆಗಳಿದ್ದು, ಈ ಬಡಾವಣೆಗಳಲ್ಲಿ ರಸ್ತೆಗಳಿಗೆ, ಉದ್ಯಾನವನಕ್ಕೆ ಹಾಗೂ ಇತರ ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿಟ್ಟಿರುವ ಜಾಗವನ್ನು ಭೂ ಮಾಲೀಕರು ಅತಿಕ್ರಮಣ ಮಾಡಿಕೊಂಡು ಸರಕಾರದ ನೀತಿ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿರುವದಲ್ಲದೆ ಪಂಚಾಯಿತಿಗೆ ಸೇರಿದ ಅಂದಾಜು ರೂ. 100 ಕೋಟಿ ಬೆಲೆಯ ಭೂಮಿ ಅತಿಕ್ರಮಣ ವಾಗಿರುವದು ದಾಖಲೆಗಳ ಮೂಲಕ ಬಹಿರಂಗಗೊಂಡಿದೆ.

ಕಳೆದ 1990 ರಿಂದ ಇದುವರೆಗೆ ಕಂಡುಬಂದ ದಾಖಲೆ ಪ್ರಕಾರ ಈ ಅಕ್ರಮಗಳು ನಡೆದಿದ್ದು ಈ ಬಗ್ಗೆ ಆಗಾಗ್ಗೆ ಪಂಚಾಯಿತಿ ಆಡಳಿತ ಮಂಡಳಿ ಚರ್ಚೆ ನಡೆಸುತ್ತಿದ್ದರೂ ಇದಕ್ಕೆ ಯಾವದೇ ರೀತಿಯ ಫಲಶೃತಿ ಕಂಡುಬಂದಿಲ್ಲ. ಭೂಮಾಫಿಯಾದೊಂದಿಗೆ ಕೈಜೋಡಿಸಿ ಕೆಲವು ಅಧಿಕಾರಿಗಳು ಹಾಗೂ ಕೆಲವು ಜನಪ್ರತಿನಿಧಿಗಳು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿರುವದೇ ಈ ಆವಾಂತರಕ್ಕೆ ಪ್ರಮುಖ ಕಾರಣವಾಗಿದೆ.

ಪಂಚಾಯಿತಿ ವ್ಯಾಪ್ತಿಯೊಳಗೆ ಅನುಮೋದನೆ ನೀಡಿರುವ ಬಡಾವಣೆಗಳಲ್ಲಿ ಉದ್ಯಾನವನಕ್ಕೆ ಕಾಯ್ದಿರಿಸಿರುವ ರಸ್ತೆ, ಸಾರ್ವಜನಿಕ ಉದ್ದೇಶಗಳಿಗೆ ಸಂಬಂಧಿಸಿದ ಭೂಮಿ ಸಂಪೂರ್ಣ ಖಾಸಗಿ ಪರಭಾರೆ ಯಾಗಿದೆ. ಉದಾಹರಣೆಗೆ ಬಾಪೂಜಿ ಬಡಾವಣೆ, 4ನೇ ಬ್ಲಾಕಿನ 59/ಸಿ, ಸರ್ವೆ ನಂ ಬಡಾವಣೆಯಲ್ಲಿ 1996 ರಲ್ಲಿ ಗ್ರಾಮ ಪಂಚಾಯಿತಿಗೆ ರಸ್ತೆ ಮತ್ತು ಉದ್ಯಾನವನಕ್ಕಾಗಿ ದಾನಪತ್ರ ನೀಡಿ ಬಿಟ್ಟುಕೊಟ್ಟ ಜಾಗ ಬಹುತೇಕ ಮಾಯವಾಗಿರುವದು ದಾಖಲೆಯಲ್ಲಿ ಕಾಣಬಹುದು.

ಕರಿಯಪ್ಪ ಬಡಾವಣೆಯಲ್ಲಿ ದಾಖಲೆ ಪ್ರಕಾರ ಉದ್ಯಾನವನಕ್ಕೆ ಮೀಸಲಿರಿಸಿರುವ ಖಾಸಗಿಯವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿ ರುವ ಪ್ರಕರಣ ಬೆಳಕಿಗೆ ಬಂದಿದೆ. ಉದ್ಯಾನವನಕ್ಕೆ ಬೇಲಿ ನಿರ್ಮಿಸಿದ್ದರೂ ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಮೌನವಹಿಸಿರುವದು ಕಾಣಬಹುದು.

ಪಟ್ಟಣ ಪಂಚಾಯಿತಿಯಿಂದ ‘ಶಕ್ತಿ’ಗೆ ಲಭ್ಯವಾಗಿರುವ ದಾಖಲೆ ಪ್ರಕಾರ 37 ಬಡಾವಣೆಗಳಲ್ಲಿ 10 ಕ್ಕೂ ಅಧಿಕ ಬಡಾವಣೆಗಳ ಕಡತಗಳು ನಾಪತ್ತೆಯಾಗಿರುವದು ಕಂಡುಬಂದಿದೆ. ಕೆಲವೊಂದು ಬಡಾವಣೆಯ ಅಧಿಕೃತ ವಿನ್ಯಾಸ ನಕ್ಷೆ ಲಭ್ಯವಿರುವದಿಲ್ಲ. ವಸತಿ ವಿನ್ಯಾಸ ಲಭ್ಯವಿರುವದಿಲ್ಲ. ಅಸಲಿ ದಾಖಲೆಗಳು ಕಾಣೆಯಾಗಿವೆ. ದಾನಪತ್ರ ಲಭ್ಯವಿರುವದಿಲ್ಲ. ವಸತಿ ವಿನ್ಯಾಸದ ನಕಲು ಪ್ರತಿ ಮಾತ್ರ ಇರುವದಾಗಿ ಅಧಿಕಾರಿಗಳು ದಾಖಲೆ ನೀಡಿದ್ದಾರೆ. ಹಲವು ಬಡಾವಣೆಗಳ ಮೂಲ ದಾಖಲೆಗಳು ಕಳೆದ ಕೆಲವು ವರ್ಷಗಳಿಂದ ನಾಪತ್ತೆಯಾಗಿದ್ದು ಈ ಬಗ್ಗೆ ಅಧಿಕಾರಿಗಳು ಇನ್ನೂ ಕ್ರಮ ಕೈಗೊಳ್ಳದಿರುವದು ಸಂಶಯಕ್ಕೆ ಎಡೆಮಾಡಿದೆ. ಆದರೆ ಈ ಕಾಣೆಯಾಗಿರುವ ದಾಖಲೆಗಳ ಪ್ರತಿಗಳು ಮಾತ್ರ ಕುಶಾಲನಗರ ಪಟ್ಟಣದ ಕೆಲವು ಹೋರಾಟಗಾರರ ಬಳಿ ಇರುವದು ಈ ಪ್ರಕರಣದ ವೈಶಿಷ್ಟ್ಯತೆ.

ಇನ್ನೊಂದೆಡೆ 3ನೇ ಬ್ಲಾಕಿನ ಮಾರುಕಟ್ಟೆ ರಸ್ತೆ ವ್ಯಾಪ್ತಿಯ ಬಡಾವಣೆಯ ನೀಲಿನಕ್ಷೆ ಲಭ್ಯವಿದ್ದರೂ ರಸ್ತೆಗೆ ಮೀಸಲಿರಿಸಿದ್ದ 0.46 ಎಕರೆ ಮತ್ತು ಉದ್ಯಾನವನಕ್ಕೆ ಮೀಸಲಿರಿಸಿದ್ದ 0.30 ಎಕರೆ ಜಾಗವನ್ನು ಪಂಚಾಯಿತಿ ವಾಪಾಸ್ ನೀಡಿರುವದು ದಾಖಲೆ ಮೂಲಕ ಕಂಡುಬಂದಿದೆ. ಈ ಅಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿದಲ್ಲಿ ಕುಶಾಲನಗರ ಪಂಚಾಯಿತಿ ಯಲ್ಲಿ ಕಾರ್ಯನಿರ್ವಹಿಸಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕುಶಾಲನಗರ ಪಟ್ಟಣ ಸೇರಿದಂತೆ ಹೆದ್ದಾರಿ ರಸ್ತೆ ಬದಿಗಳಲ್ಲಿ 1 ಸೆಂಟ್ ಜಾಗಕ್ಕೆ ರೂ. 5 ರಿಂದ 10 ಲಕ್ಷ ತನಕ ಕುಶಾಲನಗರ ಪಟ್ಟಣದಲ್ಲಿ ಮೌಲ್ಯವಿದ್ದು ಇದುವರೆಗೆ ನಡೆದ ಅಕ್ರಮ ಪರಭಾರೆಯ ಮಾರುಕಟ್ಟೆ ಮೌಲ್ಯ ರೂ. 100 ಕೋಟಿಗೂ ಅಧಿಕ ಎನ್ನಬಹುದು. ಈ ಮೂಲಕ ರಾಜ್ಯಪಾಲರ ಹೆಸರಿನಲ್ಲಿ ನೊಂದಾಯಿಸಲ್ಪಟ್ಟಿರುವ ಜಾಗವನ್ನು ಸ್ಥಳೀಯ ಅಧಿಕಾರಿಗಳೇ ನಕಲಿ ದಾಖಲೆ ಸೃಷ್ಟಿಸಿ ಖಾಸಗಿಯವರ ಪಾಲಾಗುವಂತೆ ಮಾಡುವಲ್ಲಿ ಯಶಸ್ಸು ಕಂಡಿರುವದು ನಿಜಕ್ಕೂ ಘೋರ ದುರಂತ ಎನ್ನಬಹುದು.

ಕುಶಾಲನಗರ ಪಟ್ಟಣ ಪಂಚಾಯಿತಿ ಎದುರು ಭಾಗದಲ್ಲಿ ಕೋಟಿಗಟ್ಟಲೆ ರೂಪಾಯಿ ಬೆಲೆಬಾಳುವ ಜಾಗವೊಂದು ವ್ಯಾಜ್ಯದಲ್ಲಿದ್ದು ಪಟ್ಟಣ ಪಂಚಾಯಿತಿ ಈ ಬಗ್ಗೆ ಬಹುತೇಕ ನಿರ್ಲಕ್ಷ್ಯ ತಾಳುವದರೊಂದಿಗೆ ಈ ಜಾಗ ಕೂಡ ಕೈತಪ್ಪಿ ಹೋಗುವ ಸಾಧ್ಯತೆ ಅಧಿಕವಾಗಿದೆ. ಇದೇ ರೀತಿ ಪಟ್ಟಣದ 20 ಕ್ಕೂ ಅಧಿಕ ಸರಕಾರಿ ಜಾಗಗಳು ವ್ಯಾಜ್ಯದಲ್ಲಿದ್ದು ಇದರ ಬಗ್ಗೆ ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದಲ್ಲಿ ಸರಕಾರದ ಆಸ್ತಿ ಖಾಸಗಿ ವ್ಯಕ್ತಿಗಳ ಪರವಾಗುವದು ನಿಶ್ಚಿತ ಎನ್ನಬಹುದು. ಜಿಲ್ಲಾಧಿಕಾರಿಗಳು ಅಕ್ರಮಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದರೂ, ಪಂಚಾಯಿತಿ ಆಡಳಿತ ಮಂಡಳಿ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವದು ಸಂಶಯಕ್ಕೆ ಎಡೆಮಾಡುತ್ತಿದೆ.

ಈ ಎಲ್ಲಾ ಅಕ್ರಮಗಳು ಕುಶಾಲನಗರ ಪಟ್ಟಣದಲ್ಲಿ ನಿರಂತರವಾಗಿ ನಡೆಯುತ್ತಿದ್ದು ಕಾಣದ ಕೈಗಳು ಇದರ ಹಿಂದೆ ಇರುವದು ಖಚಿತವಾಗಿದೆ. ಈ ಕಾರಣ ಕೂಡಲೇ ಜಿಲ್ಲಾಧಿಕಾರಿಗಳು ಕುಶಾಲನಗರ ಪಟ್ಟಣದ ಎಲ್ಲಾ ಬಡಾವಣೆಗಳ ಮರು ಸರ್ವೆ ಕಾರ್ಯ ನಡೆಸುವದರೊಂದಿಗೆ ಸರಕಾರಿ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಮೀಸಲಾಗಿರುವ ಜಾಗವನ್ನು ಪತ್ತೆಹಚ್ಚಿ ವಶಪಡಿಸಿ ಕೊಂಡು ಸಂರಕ್ಷಿಸುವ ದರೊಂದಿಗೆ ಇಂತಹ ಅಕ್ರಮಗಳಲ್ಲಿ ಕೈಜೋಡಿಸಿರುವ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕಾಗಿದೆ.

ಈ ಬಗ್ಗೆ ಈಗಾಗಲೇ ಪಂಚಾಯಿತಿಗೆ ದೂರುಗಳು ಬಂದಿದ್ದು ದಾಖಲೆ ಪ್ರಕಾರ ಕೆಲವು ಬಡಾವಣೆಗಳ ಮಾಲೀಕರು ಉದ್ಯಾನವನ, ಇತರ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ಸರಕಾರಿ ಜಾಗವನ್ನು ಮಾರಾಟ ಅಥವ ಒತ್ತುವರಿ ಮಾಡಿರುವದು ದೃಢಪಟ್ಟಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ‘ಶಕ್ತಿ’ಯೊಂದಿಗೆ ಖಚಿತಪಡಿಸಿದ್ದಾರೆ.

ನಾಪತ್ತೆಯಾಗಿರುವ ಮೂಲ ದಾಖಲೆಗಳನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದ್ದು ಸರಕಾರಿ ಜಾಗವನ್ನು ಸರ್ವೆ ಮಾಡುವ ಮೂಲಕ ಮರಳಿ ಪಂಚಾಯಿತಿ ವಶಕ್ಕೆ ಪಡೆಯ ಲಾಗುವದು.

ಇಂತಹ ಪ್ರಕರಣಗಳಲ್ಲಿ ಯಾವದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾ ಗುವದು ಎಂದು ಶ್ರೀಧರ್ ತಿಳಿಸಿದ್ದಾರೆ. ಈ ಬಗ್ಗೆ ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

- ಚಂದ್ರಮೋಹನ್