*ಸಿದ್ದಾಪುರ, ಜು.6: ಮಾಲ್ದಾರೆ ಗ್ರಾಮ ಪಂಚಾಯ್ತಿ ಗ್ರಾಮ ಸಭೆಯು ಗ್ರಾ.ಪಂ ಅಧ್ಯಕ್ಷೆ ರಾಣಿ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಕಾಡಾನೆ ಹಾವಳಿ, ಪಡಿತರ ಅವ್ಯವಸ್ಥೆ, ವಿದ್ಯುತ್ ಮುಂತಾದ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಸಲಾಯಿತು. ಬಾಡಗ ಬಾಣಂಗಾಲ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಎದುರಾಗುತ್ತಿದ್ದು, ಸೆಸ್ಕ್ ಇಲಾಖೆ ಸಮಸ್ಯೆಯತ್ತ ಬಗೆಹರಿಸಲು ಮುಂದಾಗುತ್ತಿಲ್ಲ. ಇಲಾಖೆ ಕಚೇರಿಗೆ ದೂರವಾಣಿ ಕರೆ ಮಾಡಿದ ಸಂದರ್ಭ ಸಿದ್ದಾಪುರ ಅಥವಾ ಪಾಲಿಬೆಟ್ಟ ಕಚೇರಿಗೆ ಕರೆ ಮಾಡಿ ಎಂದು ಅಸಡ್ಡೆಯಿಂದ ವರ್ತಿಸುತ್ತಿದ್ದಾರೆ ಎಂದು, ಗ್ರಾ.ಪಂ. ಸದಸ್ಯ ಸಜಿ ಥಾಮಸ್ ದೂರಿದರು.
ಮಾಲ್ದಾರೆ- ಸಿದ್ದಾಪುರ ಮುಖ್ಯ ರಸ್ತೆಯಲ್ಲಿನ ಎರಡು ಪುರಾತನ ಸೇತುವೆ ಕುಸಿಯುವ ಹಂತದಲ್ಲಿದ್ದು ತಕ್ಷಣ ಸರಿಪಡಿಸದಿದ್ದಲ್ಲಿ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವದಾಗಿ ಬೆಳೆಗಾರ ಬೆಳ್ಯಪ್ಪ ಆತಂಕ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಕಾಡಾನೆ ಹಾವಳಿಯಿಂದಾಗಿ ವಿದ್ಯಾರ್ಥಿಗಳು ಶಾಲೆಗೆ ತೆರಳದೆ ಮನೆಯಲ್ಲೇ ಉಳಿದುಕೊಳ್ಳುವಂತಾಗಿದ್ದು, ಅರಣ್ಯ ಇಲಾಖೆ ಮತ್ತು ರಾಜ್ಯ ಸರ್ಕಾರ ಕೂಡಲೇ ಸಮಸ್ಯೆ ಇತ್ಯರ್ಥ ಪಡಿಸಬೇಕೆಂದು ಮಾಲ್ದಾರೆ ಗ್ರಾ.ಪಂ. ಮಾಜಿ ಸದಸ್ಯ ಮುಹಮ್ಮದ್ ಅಲಿ ತಿಳಿಸಿದರು. ಗ್ರಾಮದ ಜನತೆಗೆ ಪಡಿತರ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಗ್ರಾ.ಪಂ ಮಾಜಿ ಅಧ್ಯಕ್ಷ ವಿಜು ಬಿದ್ದಪ್ಪ ಆರೋಪಿಸಿದರು. ಪಡಿತರ ಕಾಳ ಸಂತೆಯಲ್ಲಿ ಮಾರಾಟ ವಾಗುತ್ತಿದ್ದು ಆಹಾರ ಇಲಾಖೆ ಅಧಿಕಾರಿಗಳು ನೇರ ಶಾಮೀಲಾಗಿ ದ್ದಾರೆ ಎಂಬದಾಗಿ ಆರೋಪಿಸಿದರು. ವೀರಾಜಪೇಟೆ ತಾಲೂಕು ಬರಪೀಡಿತ ಪ್ರದೇಶ ಎಂಬದಾಗಿ ಘೊಷಣೆ ಯಾಗಿದ್ದರೂ, ಬರ ಪರಿಹಾರಕ್ಕಾಗಿ ಯಾವದೇ ಕ್ರಮ ಕೈಗೊಳ್ಳದೆ ಇರುವದಕ್ಕೆ ಗ್ರಾಮಸ್ಥರು ಮತ್ತು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಬೂಬಕ್ಕರ್ ಮಾತನಾಡಿ, ಮಠ ಗ್ರಾಮ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಿಂದ ರಸ್ತೆ ಅಭಿವೃದ್ದಿ ಪಡಿಸಲಾಗಿದ್ದು, ಬೆಲೆಬಾಳುವ ಮರಗಳನ್ನು ಕಡಿದು ಸಾಗಿಸಲಾಗಿದೆ. ಕೆಲವು ಮರಗಳು ರಸ್ತೆಯಲ್ಲೇ ಉಳಿದಿದ್ದು ವರ್ಷ ಕಳೆದರೂ ತೆರವು ಗೊಳಿಸಲಿಲ್ಲ. ಇದರಿಂದಾಗಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು, ಕೂಡಲೆ ರಸ್ತೆಯಲ್ಲಿರುವ ಮರಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು.
ಪಿಡಿಓ ರಾಜೇಶ್ ಮಾತನಾಡಿ, ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ ಮೂಲಕ 20 ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ಮನೆ ದುರಸ್ತಿ, ತಡೆಗೋಡೆ ಸೇರಿದಂತೆ ನಾನಾ ಕಾಮಗಾರಿಗಳನ್ನು ಪೂರ್ಣ ಗೊಳಿಸಲಾಗಿದೆ ಎಂದರು. ಮುಂದಿನ ಕಾಮಗಾರಿಗಳ ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದ್ದು, ಶೀಘ್ರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವದು ಎಂದು ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭ ಜಿ.ಪಂ. ಸದಸ್ಯೆ ಲೀಲಾವತಿ, ತಾ.ಪಂ ಸದಸ್ಯೆ ಚಿಣ್ಣಮ್ಮ, ಗ್ರಾ.ಪಂ. ಉಪಾಧ್ಯಕ್ಷ ರಾಜು, ಸದಸ್ಯ ಸತೀಶ್, ಕರುಂಬಯ್ಯ, ಉಮೇಶ್, ಮುತ್ತಪ್ಪ, ನಿಯಾಜ್, ಪದ್ಮಾ, ಫಾತಿಮಾ, ಇಂದಿರಾ, ಮಾಲತಿ, ಪವಿತ್ರ, ರುದ್ರಪ್ಪ, ಗ್ರಾಮಸ್ಥರಾದ ಅಜ್ಜಿನಿಕಂಡ ರಾಜು ಅಪ್ಪಯ್ಯ, ಬಾವ ಮಾಲ್ದಾರೆ ಇತರರು ಇದ್ದರು.