ಮಡಿಕೇರಿ, ಜು. 6: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಭೆಯು ತಾ. 12 ರಂದು ನಿಗಮದ ಅಧ್ಯಕ್ಷ ಶಾಸಕ ಗೋಪಾಲ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಕೊಡಗಿನ ಮೂರೂ ತಾಲೂಕುಗಳಲ್ಲಿ ಬಸ್ ಡಿಪೋಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗುವದೆಂದು ಕೆಎಸ್‍ಆರ್‍ಟಿಸಿ ನಿರ್ದೇಶಕ ಎಂ.ಎ. ಶೌಕತ್ ಆಲಿ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆ ದೇಶದಲ್ಲಿಯೇ ಅತ್ಯಂತ ಆಕರ್ಷಣೀಯ ಪ್ರವಾಸಿ ಕೇಂದ್ರವಾಗಿದ್ದು, ದೇಶದ ಎಲ್ಲೆಡೆಯಿಂದ ಪ್ರವಾಸಿಗರು ಆಗಮಿಸುತ್ತಾರೆ. ಜಿಲ್ಲೆಯ ಜನರಿಗೆ ಹಾಗೂ ಪ್ರವಾಸಿಗರಿಗೆ ಸಮರ್ಪಕ ರೀತಿಯಲ್ಲಿ ಬಸ್ ವ್ಯವಸ್ಥೆಯನ್ನು ಕಲ್ಪಿಸುವ ಉದ್ದೇಶವನ್ನು ಕೆಎಸ್‍ಆರ್‍ಟಿಸಿ ಹೊಂದಿದೆ ಎಂದು ತಿಳಿಸಿದ್ದಾರೆ.

ಮಡಿಕೇರಿ ನಗರದಲ್ಲಿ ಮಾತ್ರ ಬಸ್ ಡಿಪೋವಿದ್ದು, ಉಳಿದಿರುವ ಪ್ರಮುಖ ಪಟ್ಟಣಗಳಿಗೂ ಡಿಪೋಗಳ ಅಗತ್ಯವಿದೆ. ವೀರಾಜಪೇಟೆ, ಸೋಮವಾರಪೇಟೆ, ಶನಿವಾರಸಂತೆ ಮತ್ತು ಕುಶಾಲನಗರದಲ್ಲಿ ಡಿಪೋ ನಿರ್ಮಾಣಕ್ಕೆ ಸೂಕ್ತ ಸ್ಥಳಾವಕಾಶವಿದೆ. ಈ ಪ್ರದೇಶದಲ್ಲಿ ನಿಗಮದ ಬಸ್ ಘಟಕ ನಿರ್ಮಾಣಕ್ಕೆ ಬಹುದಿನಗಳಿಂದ ಬೇಡಿಕೆಯಿದ್ದು, ತಾ. 12 ರಂದು ನಡೆಯುವ ಸಭೆಯಲ್ಲಿ ಬೇಡಿಕೆ ಕುರಿತು ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗುವದೆಂದು ತಿಳಿಸಿದ್ದಾರೆ. ಕುಶಾಲನಗರದಲ್ಲಿರುವ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಕಿರಿದಾಗಿದ್ದು, ವಿಸ್ತರಣೆ ಮತ್ತು ಆಧುನೀಕರಣಗೊಳ್ಳುವ ಅಗತ್ಯವಿದೆ. ಈ ಬಗ್ಗೆಯೂ ಅಧ್ಯಕ್ಷರ ಗಮನ ಸೆಳೆಯಲಾಗುವದು. ಬಸ್ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವದರಿಂದ ಆದಾಯವೂ ಹೆಚ್ಚಾಗಲಿದೆ, ಅಲ್ಲದೆ ಪ್ರಯಾಣಿಕರಿಗೂ ಅನುಕೂಲವಾಗಲಿದೆ ಎಂದು ಶೌಕತ್ ಆಲಿ ಹೇಳಿದ್ದಾರೆ.