ಸೋಮವಾರಪೇಟೆ, ಜು.6: ಜನತೆಯ ಬದುಕಿಗೆ ಮಾರಕವಾಗಿ ಪರಿಣಮಿಸುವ ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಜಿಲ್ಲೆಯ ಜನರನ್ನು ದಾರಿತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಉಸ್ತುವಾರಿ ವಿ.ಎಂ. ವಿಜಯ ಕಸ್ತೂರಿ ರಂಗನ್ ವರದಿ ಜಾರಿಯಿಂದ ರೈತರಿಗೆ ಯಾವದೇ ತೊಂದರೆಯಿಲ್ಲ, ಮರಳು ಗಣಿಗಾರಿಕೆ ಮತ್ತು ಮರ ಕಡಿಯುವದಕ್ಕೆ ಮಾತ್ರ ತೊಂದರೆಯಾಗುತ್ತದೆ ಎಂದು ಸಂಸದರು ಹೇಳಿರುವದು ಖಂಡನೀಯ ಎಂದರು.
ಕೊಡಗಿನ ರೈತರು ತಮ್ಮ ಆರ್ಥಿಕ ಸ್ಥಿತಿಯನ್ನು ಸರಿದೂಗಿಸಲು ಕಾಫಿ ತೋಟಗಳ ನಡುವೆ ಸಿಲ್ವರ್ ಮರಗಳನ್ನು ಬೆಳೆದಿದ್ದು, ಇದಕ್ಕೂ ಕಂಟಕ ಎದುರಾಗಲಿದೆ. ಜಿಲ್ಲೆಯಲ್ಲಿ ಮನೆಗಳನ್ನು ನಿರ್ಮಿಸುವವರು ಮುಂದಿನ ದಿನಗಳಲ್ಲಿ ಮರಳು ಮತ್ತು ಮರಗಳಿಗೆ ಹೊರ ಜಿಲ್ಲೆಗಳನ್ನು ಅವಲಂಭಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಸದರು ರೈತನ ಮಗನಾಗಿದ್ದುಕೊಂಡು ಈ ರೀತಿಯ ರೈತ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವದು ಸರಿಯಲ್ಲ. ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿರುವದು ಖಂಡನೀಯ ಎಂದರು.
ಜಿಲ್ಲೆಯ ರೈತರು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ. ಕೊಡಗಿನ ಜನರ ಬದುಕುವ ಹಕ್ಕು, ಮರದ ಹಕ್ಕನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರೆ, ಪಕ್ಷದ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುವದು ಎಂದರು.
ಮಾಜಿ ಸಂಸದ ಅಡಗೂರು ವಿಶ್ವನಾಥ್ ಅವರು ಪಕ್ಷಕ್ಕೆ ಸೇರ್ಪಡೆಗೊಂಡಿರುವದರಿಂದ ಕೊಡಗು ಜಿಲ್ಲೆಯಲ್ಲಿ ಜೆಡಿಎಸ್ ಬಲವರ್ಧನೆಗೊಳ್ಳಲಿದೆ. ಈ ಹಿಂದೆ ಅವರೊಂದಿಗೆ ಗುರುತಿಸಿಕೊಂಡಿದ್ದ ಹಲವಾರು ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ವಿ.ಎಂ. ವಿಜಯ ಭರವಸೆ ವ್ಯಕ್ತಪಡಿಸಿದರು.
ಜಿಲ್ಲೆಯ ಶಾಸಕರುಗಳಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ ಸರ್ಕಾರದಿಂದ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಜಿಲ್ಲೆಯ ಗ್ರಾಮೀಣ ರಸ್ತೆಗಳನ್ನು ಗಮನಿಸಿದರೆ ಇವರ ಕಾರ್ಯ ಗೊತ್ತಾಗುತ್ತದೆ ಎಂದು ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಆರ್. ಸುರೇಶ್ ದೂರಿದರು.
ಗೋಷ್ಠಿಯಲ್ಲಿ ಯುವ ಜನತಾದಳದ ಜಿಲ್ಲಾಧ್ಯಕ್ಷ ಎನ್.ಆರ್. ಅಜೀಶ್ ಕುಮಾರ್, ವಕ್ತಾರ ಎ.ಜೆ. ಕೃಷ್ಣಪ್ಪ ಇದ್ದರು.