ಕುಶಾಲನಗರ, ಜು. 6: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಹೆಚ್.ಬಿ.ಚಂದ್ರಪ್ಪ ರಾಜೀನಾಮೆ ನೀಡಿದ್ದಾರೆ. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ವೈಯಕ್ತಿಕ ಕಾರಣಗಳಿಂದ ಹಾಗೂ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಅವರ ಸೂಚನೆ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುತ್ತಿಲ್ಲ ಎಂದಿದ್ದಾರೆ.
ತನ್ನ ಅಧಿಕಾರಾವಧಿಯಲ್ಲಿ ಸಂಘದ ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ಕಳೆದ 26 ತಿಂಗಳ ಅವಧಿಯಲ್ಲಿ ರೂ 1 ಕೋಟಿಗೂ ಅಧಿಕ ವೆಚ್ಚದಲ್ಲಿ ರೈತ ಸಹಕಾರ ಭವನ ಆವರಣದಲ್ಲಿ ಗೋದಾಮು ಹಾಗೂ ವಸತಿಗೃಹಗಳ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸದಸ್ಯರಿಗೆ ಗೃಹ ಸಾಲ, ವಾಹನ ಸಾಲದ ಸೌಲಭ್ಯ ಕೂಡ ಕಲ್ಪಿಸಲಾಗಿದೆ. ತನ್ನ ಅಧಿಕಾರಾವಧಿ ಸಂದರ್ಭ ಯಾವದೇ ಹಗರಣವಿಲ್ಲದೆ ಕೆಲಸ ಕಾರ್ಯ ನಡೆಸಿದ್ದು ಈ ಸಂದರ್ಭ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುವದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನಾಮನಿರ್ದೇಶಿತ ನಿರ್ದೇಶಕ ಬಿ.ಎಸ್.ಚಂದ್ರಶೇಖರ್ ಇದ್ದರು.
ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಉಪಾಧ್ಯಕ್ಷ ಟಿ.ಕೆ. ರಘು ಇತ್ತೀಚೆಗಷ್ಟೆ ತನ್ನ ಸ್ಥಾನವನ್ನು ತ್ಯಜಿಸಿದ್ದು, ಇದೀಗ ಅಧ್ಯಕ್ಷ ಸ್ಥಾನವನ್ನು ಹೆಚ್.ಬಿ.ಚಂದ್ರಪ್ಪ ತೊರೆದಿರುವದು ಸಹಕಾರ ಸಂಘದ ಸದಸ್ಯರ ನಡುವೆ ಚರ್ಚೆಗೆ ಗ್ರಾಸವಾಗಿದೆ. ಮಾಹಿತಿ ಪ್ರಕಾರ ಅಧ್ಯಕ್ಷ ಸ್ಥಾನ 5 ವರ್ಷದ ಅವಧಿಗೆ ಸೀಮಿತವಾಗಿದ್ದು ಇತ್ತೀಚಿನ ದಿನಗಳಲ್ಲಿ ಕಳೆದ 26 ತಿಂಗಳ ಅವಧಿಯಲ್ಲಿ ದಕ್ಷ ಆಡಳಿತ ನೀಡಿದ ಅಧ್ಯಕ್ಷ ಚಂದ್ರಪ್ಪ ಅವರ ಮೇಲೆ ಕೆಲವು ಹಿರಿಯ ಸದಸ್ಯರು ಅಸಹಕಾರ ಧೋರಣೆ ತಳೆಯುತ್ತಿರುವದು ಕೇಳಿಬಂದ ಮಾತಾಗಿದೆ. ಸಂಘದ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಭಾರೀ ಲಾಬಿ ಕೂಡ ನಡೆದಿರುವ ಬಗ್ಗೆ ಮಾಹಿತಿ ದೊರೆತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಮಟ್ಟದಲ್ಲಿ ಕೂಡ ಶಿಫಾರಸು ನಡೆದಿದೆ. ಒಟ್ಟು 11 ಸದಸ್ಯರಲ್ಲಿ ಬಿಜೆಪಿ ಬೆಂಬಲಿತ ಸದಸ್ಯರೇ ಅಧಿಕವಾಗಿದ್ದರೂ ಚಂದ್ರಪ್ಪ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವದು ಅಸಾಧ್ಯವಾಗಿರುವದು ಪಕ್ಷದ ಒಳಗೆ ಎಲ್ಲವೂ ಸರಿಯಿಲ್ಲ ಎನ್ನುವದು ಬಹಿರಂಗವಾಗಿದೆ.