ಸುಂಟಿಕೊಪ್ಪ, ಜು. 6: ಸರ್ಕಾರದ ವತಿಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಂಡು ಓದಿನತ್ತ ಗಮನ ಹರಿಸಿ ಪೋಷಕರು ಮತ್ತು ಸಂಸ್ಥೆಯ ಶಿಕ್ಷಕರಿಗೆ ಮತ್ತು ಶಾಲೆಗೆ ಕೀರ್ತಿ ತರಬೇಕು ಎಂದು ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ ಹೇಳಿದರು.

ಸಮೀಪದ ಗರಗಂದೂರುವಿನ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಸೈಕಲ್‍ಗಳನ್ನು ವಿತರಿಸಿ ಮಾತನಾಡಿದರು. ಸಿಆರ್‍ಪಿ ವಸಂತ ಮಾತನಾಡಿ, ಸರ್ಕಾರವು ಸರ್ಕಾರಿ ಶಾಲೆಗಳ ಮಕ್ಕಳಿಗೆ ನೀಡಲ್ಪಡುವ ಹಲವು ರೀತಿಯ ಸೌಲಭ್ಯಗಳ ಮಾಹಿತಿ ನೀಡಿದರಲ್ಲದೇ, ಶಿಕ್ಷಕರು ಮತ್ತು ಪೋಷಕರುಗಳಿಂದ ಮಾತ್ರ ವಿದ್ಯಾರ್ಥಿಗಳ ಅಭಿವೃದ್ಧಿ ಸಾಧ್ಯ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಚಂದಪ್ಪ ವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಸುಮಾವತಿ ಮತ್ತು ಶಿಕ್ಷಕರು ಹಾಜರಿದ್ದರು. ಮುಖ್ಯ ಶಿಕ್ಷಕಿ ರೇವತಿ ಸ್ವಾಗತಿಸಿ, ಶಿಕ್ಷಕಿ ಬಿಂದು ವಂದಿಸಿದರು.