ವೀರಾಜಪೇಟೆ, ಜು. 6: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡಂಗಾಲ ಮೂವತ್ತುಮಾನಿ ಎಂಬಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಸುಮಾರು 20 ಲೋಡು ಫಿಲ್ಟರ್ ಮರಳನ್ನು ವೀರಾಜಪೇಟೆ ತಹಶೀಲ್ದಾರ್ ಆರ್. ಗೊವಿಂದರಾಜು ವಶಪಡಿಸಿಕೊಂಡಿದ್ದಾರೆ.ಮೂವತ್ತುಮಾನಿಯ ಮಣ್ಣು ಮರಳು ಮಿಶ್ರಿತ ಗದ್ದೆಯಲ್ಲಿ ಜೆಸಿಬಿ ಮೂಲಕ ಅಗೆದು ದೊಡ್ಡ ಹೊಂಡದಲ್ಲಿ ಹಾಕಿ ಮರಳು ಹಾಗೂ ಮಣ್ಣನ್ನು ಬೇರ್ಪಡಿಸಿ (ಫಿಲ್ಟರ್) ಸಾಗಾಟಕ್ಕೆ ಸಿದ್ಧಗೊಳಿಸಲಾಗಿತ್ತು. ಗ್ರಾಮಸ್ಥರು ನೀಡಿದ ಗುಪ್ತ ಮಾಹಿತಿಯನ್ನು ಆಧರಿಸಿ ತಹಶೀಲ್ದಾರ್ ಹಾಗೂ ಕಂದಾಯ ಪರಿವೀಕ್ಷಕ ಪಳಂಗಪ್ಪ, ಸಿಬ್ಬಂದಿ ಧಾಳಿ ನಡೆಸಿ ಅಕ್ರಮ ಮರಳನ್ನು ವಶ ಪಡಿಸಿಕೊಂಡಿದ್ದಾರೆ.

(ಮೊದಲ ಪುಟದಿಂದ) ಧಾಳಿ ನಡೆಸುವ ಸುಳಿವು ಅರಿತ ಜಾಗದ ಮಾಲೀಕರು ಹಾಗೂ ಕಾರ್ಮಿಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಭಾಗದಲ್ಲಿ ನಿರಂತರವಾಗಿ ಅಕ್ರಮ ಮರಳು ಗಣಿಗಾರಿಕೆ ದಂಧೆ ನಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿದೆ, ಹಂತ ಹಂತವಾಗಿ ಅಕ್ರಮ ಮರಳು ದಾಸ್ತಾನು ಹಾಗೂ ಸಾಗಾಟವನ್ನು ಮಟ್ಟ ಹಾಕಲಾಗುವದು ಎಂದು ತಹಶೀಲ್ದಾರ್ ಗೋವಿಂದರಾಜ್ ತಿಳಿಸಿದ್ದಾರೆ.