ಕುಶಾಲನಗರ, ಜು. 5: ಕುಶಾಲನಗರ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಗುವೊಂದು ಚಿಕಿತ್ಸೆಗೆ ಬಂದು ಮನೆಗೆ ಹಿಂತಿರುಗಿದ ನಂತರ ಮೃತಪಟ್ಟ ಘಟನೆ ನಡೆದಿದೆ.

ಗುಮ್ಮನಕೊಲ್ಲಿಯ ಹಾರಂಗಿ ರಸ್ತೆ ನಿವಾಸಿ ಪಲ್ಲವಿ ಮತ್ತು ರಘು ದಂಪತಿ ಪುತ್ರ ಒಂದೂವರೆ ವರ್ಷ ಪ್ರಾಯದ ರಿಷಿಕ್ ಮೃತಪಟ್ಟ ಮಗು. ಮೂರು ದಿನಗಳ ಹಿಂದೆ ರಿಷಿಕ್‍ಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ತಾಯಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಕರೆತಂದಿದ್ದರು. ಈ ವೇಳೆ ಕರ್ತವ್ಯ ನಿರತ ವೈದ್ಯರು ಮಗುವನ್ನು ತಪಾಸಣೆ ನಡೆಸಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದಾರೆ. ಮನೆಗೆ ಕರೆದುಕೊಂಡು ಹೋದ ತಾಯಿ ಮಗುವಿಗೆ ಔಷಧಿ ಕುಡಿಸಿ ಮಲಗಿಸಿದ್ದರು. ಮಧ್ಯಾಹ್ನ ಊಟದ ಸಮಯ ಮಗುವಿನ ಆರೋಗ್ಯ ಹದಗೆಟ್ಟಿದ್ದು ಕೂಡಲೇ ಮತ್ತೆ ಸರಕಾರಿ ಆಸ್ಪತ್ರೆಗೆ ತಂದ ವೇಳೆ ಮಗುವಿನ ಹೃದಯ ಬಡಿತ, ಉಸಿರಾಟ ಕ್ಷೀಣವಾಗಿತ್ತು ಎನ್ನಲಾಗಿದೆ. ಜ್ವರ ಹೆಚ್ಚಾದ ವೇಳೆ ಈ ರೀತಿ ಆಗುವ ಸಾಧ್ಯತೆ ಇರುವದರಿಂದ ವೈದ್ಯರು ಡ್ರಿಪ್ಸ್ ಹಾಕಿ ಚಿಕಿತ್ಸೆ ನೀಡಲು ಪ್ರಯತ್ನಿಸಿದರಾದರೂ ಫಲ ನೀಡದೆ ಮಗು ಮೃತಪಟ್ಟಿದೆ.

ವಿಷಯ ತಿಳಿಯುತ್ತಿದ್ದಂತೆ ಪೋಷಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು, ಸಾರ್ವಜನಿಕರು ಕೂಡ ಇವರ ಜೊತೆ ಸೇರಿಕೊಂಡು ಪ್ರತಿಭಟನೆಗೆ ಮುಂದಾದ ಘಟನೆ ನಡೆಯಿತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಕ್ರೋಶಿತರನ್ನು ಸಮಾಧಾನಪಡಿಸಿ, ಮರಣೋತ್ತರ ಪರೀಕ್ಷೆಗಾಗಿ ಮಗುವಿನ ಮೃತದೇಹವನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲು ಕ್ರಮಕೈಗೊಂಡರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.