ಮಡಿಕೇರಿ, ಜು. 5: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಖಾಲಿ ಇರುವ ಅಡುಗೆಯವರು ಮತ್ತು ಅಡುಗೆ ಸಹಾಯಕರ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಈ ಸಂಬಂಧ ಈಗಾಗಲೇ 1:5 ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆಗೆ ಆಹ್ವಾನಿಸಿ ದಾಖಲಾತಿ ಪರಿಶೀಲನಾ ಕಾರ್ಯ ಮುಗಿದಿರುತ್ತದೆ.

ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾದ ಅಭ್ಯರ್ಥಿಗಳ ಮೆರಿಟ್ ಮತ್ತು ಮೀಸಲಾತಿಗೆ ಅನುಗುಣವಾಗಿ 1:3 ರ ಅನುಪಾತದಲ್ಲಿ ಅಡುಗೆ ತಯಾರಿಕಾ ಪ್ರಾಯೋಗಿಕ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಈಗಾಗಲೇ ಇಲಾಖಾ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಈ ಸಂಬಂಧ ಪ್ರಾಯೋಗಿಕ ಪರೀಕ್ಷೆಗೆ ಅರ್ಹರಾದ ಎಲ್ಲಾ ಅಡುಗೆಯವರ ಪ್ರಾಯೋಗಿಕ ಪರೀಕ್ಷೆಯನ್ನು ತಾ. 3 ರಂದು ನಡೆಸಲಾಗಿದೆ. ಈ ಪ್ರಾಯೋಗಿಕ ಪರೀಕ್ಷೆಯಲ್ಲಿ ಖಾಲಿ ಇರುವ 33 ಹುದ್ದೆಗಳಿಗೆ, ದಾಖಲಾತಿ ಪರಿಶೀಲನಾ ಕಾರ್ಯದಲ್ಲಿ ಅರ್ಹರಾದ 57 ಅಭ್ಯರ್ಥಿಗಳಲ್ಲಿ 56 ಅಭ್ಯರ್ಥಿಗಳು ಹಾಜರಾಗಿ ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆಯನ್ನು ಪೂರ್ಣಗೊಳಿಸಿರುತ್ತಾರೆ.

ಈ ಪ್ರಾಯೋಗಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಮೆರಿಟ್ ಮತ್ತು ಮೀಸಲಾತಿಗೆ ಅನುಗುಣವಾಗಿ 33 ಅಡುಗೆಯವರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ತಾ. 7 ರಂದು ಇಲಾಖಾ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವದು. ತಾತ್ಕಾಲಿಕ ಪಟ್ಟಿ ಪ್ರಕಟಗೊಂಡ ನಂತರ ಸದರಿ ಆಯ್ಕೆ ಪಟ್ಟಿಯ ಮೇಲೆ ಆಕ್ಷೇಪಣೆಗಳನ್ನು ಸಲ್ಲಿಸಲು 10 ದಿನಗಳ ಕಾಲಾವಕಾಶ ನೀಡಿ ತಾ. 18 ರಂದು ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುವದು.

ಅಲ್ಲದೇ ಈ ನೇಮಕಾತಿ ಪ್ರಕ್ರಿಯೆಯು ಸಂಪೂರ್ಣವಾಗಿ ಮೆರಿಟ್ ಮತ್ತು ಮೀಸಲಾತಿಗೆ ಅನುಗುಣವಾಗಿ ಪಾರದರ್ಶಕವಾಗಿ ನಡೆಯಲಿದ್ದು, ಯಾವದೇ ಅಕ್ರಮಗಳಿಗೆ, ಭ್ರಷ್ಠಾಚಾರಕ್ಕೆ ಅವಕಾಶ ಇರುವದಿಲ್ಲ. ಒಂದು ವೇಳೆ ಯಾರಾದರೂ ಮಧ್ಯವರ್ತಿಗಳು ಈ ಹುದ್ದೆಗಳಿಗೆ ನೇಮಕ ಮಾಡಿಸಿಕೊಡುವದಾಗಿ ನಂಬಿಸಿ ಹಣಕ್ಕಾಗಿ ಬೇಡಿಕೆ ಇಟ್ಟರೆ ಕೂಡಲೇ ಇಲಾಖಾ ಗಮನಕ್ಕೆ ತರಲು ಸೂಚಿಸಿದೆ. ಮಧ್ಯವರ್ತಿಗಳನ್ನು ನಂಬಿ ಹಣ ಕಳೆದುಕೊಂಡರೆ ಇಲಾಖೆ ಯಾವದೇ ರೀತಿಯಲ್ಲೂ ಜವಾಬ್ದಾರಿಯಾಗುವದಿಲ್ಲ ಎಂದು ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ಕೆ.ವಿ. ಸುರೇಶ್ ತಿಳಿಸಿದ್ದಾರೆ.