ಗೋಣಿಕೊಪ್ಪಲು, ಜು.5: ಕೊಡಗು ಜಿಲ್ಲಾ ಬಲಿಜ ಸಮಾಜ ಅಸ್ತಿತ್ವಕ್ಕೆ ಬಂದ ನಂತರ ಕಳೆದ 6 ತಿಂಗಳಿನಲ್ಲಿ ಜನಾಂಗದ ಬಗ್ಗೆ ಪ್ರಗತಿಪರ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಜಿಲ್ಲಾ ಬಲಿಜ ಸಮಾಜದ ಪದಾಧಿಕಾರಿಗಳ ನಡುವೆ ಉತ್ತಮ ಹೊಂದಾಣಿಕೆ ಇದ್ದು, ಇದೀಗ ಕೊಡಗು ಜಿಲ್ಲೆಯ ಸಮಗ್ರ ಬಲಿಜ ಜನಗಣತಿಗೆ ಒತ್ತು ನೀಡಿ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಕೊಡಗು ಬಲಿಜ ಸಮಾಜದ ಪ್ರಗತಿಪರ ಕಾರ್ಯಕ್ರಮಗಳ ಬಗ್ಗೆ ರಾಜ್ಯ ಮಟ್ಟದ ಬಲಿಜ ನಾಯಕರಿಂದಲೂ ಉತ್ತಮ ಪ್ರಶಂಸೆ ವ್ಯಕ್ತವಾಗಿದ್ದು, ಜಿಲ್ಲೆಯ ಗಣತಿಯನ್ನು ಇತರೆ ಜಿಲ್ಲೆಗಳೂ ಅಳವಡಿಸಿಕೊಳ್ಳುತ್ತಿವೆ ಎಂದು ಜಿಲ್ಲಾ ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದಾರೆ.ಯಾರೇ ಆಗಲಿ ಸಮಾಜದ ಅಭ್ಯುದಯಕ್ಕೆ ಸಹಕಾರ ಆಗುವಂತಹ ಪ್ರಗತಿಪರ ಟೀಕೆಗೆ ಸದಾ ಸ್ವಾಗತ ಎಂದು ಹೇಳಿದ್ದಾರೆ.

ಜಿಲ್ಲಾ ಅಧ್ಯಕ್ಷರ ಬಗ್ಗೆ ಆರೋಪ ಹೊರಿಸಿರುವ ಗೋಣಿಕೊಪ್ಪಲಿನ ನಾರಾಯಣ ಸ್ವಾಮಿ ಅವರು ಸಾಕ್ಷ್ಯಾಧಾರ ಸಹಿತ ಸಾಬೀತು ಮಾಡಲಿ. ಈ ಬಗ್ಗೆ ಕಾನೂನು ವ್ಯಾಪ್ತಿಯಲ್ಲಿ ತೀರ್ಮಾನ ಕೈಗೊಳ್ಳಲಾಗುವದು. ಬೆಂಗಳೂರು ಸಮಾವೇಶಕ್ಕೆ ಕೊಡಗು ಜಿಲ್ಲೆಯಿಂದ 10 ಸರ್ಕಾರಿ ಬಸ್‍ಗಳಲ್ಲಿ ಬಲಿಜ ಜನಾಂಗವನ್ನು ಸಂಘಟಿಸಲು ವಾರದ ಅವಧಿಯಲ್ಲಿ ವೈಯಕ್ತಿಕವಾಗಿ ಖರ್ಚು ಮಾಡಲಾಗಿದೆಯೇ ವಿನಃ ಯಾವದೇ ರಾಜ್ಯ ನಾಯಕರು ಹಣಕಾಸು ನೆರವನ್ನು ನೀಡಿರುವದಿಲ್ಲ. ಜಿಲ್ಲೆಯಿಂದಲೂ ಯಾರಿಂದಲೂ ಹಣ ಸಂಗ್ರಹ ಮಾಡಿರುವದಿಲ್ಲ. ಇದಕ್ಕೆ ಸೂಕ್ತ ದಾಖಲೆ ಇದ್ದಲ್ಲಿ ನೀಡಲಿ. ಅನವಶ್ಯಕ ತೇಜೋವಧೆ ಮಾಡಿದ್ದಲ್ಲಿ ಜನಾಂಗದ ಮುಂದೆ ಸೂಕ್ತ ಉತ್ತರ ನೀಡಬೇಕಾಗುತ್ತದೆ ಎಂದಿದ್ದಾರೆ.

ವೀರಾಜಪೇಟೆಯಲ್ಲಿ 2013ರಲ್ಲಿ ಜರುಗಿದ ಸಮಾವೇಶ ಯಶಸ್ವಿಗೆ ಹಲವರ ಪರಿಶ್ರಮವಿದೆ. ಸಮಾವೇಶದ ನಂತರ ಮುಂದಿನ ಮೂರುವರ್ಷ ಸದರಿ ಆರೋಪ ಮಾಡಿರುವ ನಾರಾಯಣ ಸ್ವಾಮಿ ನಾಯ್ಡು ಕೇವಲ ಒಂದು ನಿರ್ದೇಶಕರ ಸಭೆಯನ್ನೂ ನಡೆಸಿಲ್ಲ. ನೋಂದಾವಣೆಯನ್ನೂ ಮಾಡಲು ಉತ್ಸಾಹ ತೋರಿಲ್ಲ ಎಂದು ಆರೋಪಿಸಿದ್ದಾರೆ.