ಗೋಣಿಕೊಪ್ಪಲು, ಜು. 6: ಕಿರಿಯ ವಿದ್ಯಾರ್ಥಿಗಳಿಂದ ಹಿರಿಯ ತರಗತಿ ಪರೀಕ್ಷೆ ಬರೆಸಿರುವದನ್ನು ಪ್ರಶ್ನಿಸಿದನ್ನು ಸಹಿಸದೆ ತನ್ನನ್ನು ಕಡೆಗಣಿಸಿ ಶಾಲಾಭಿವೃದ್ಧಿ ಸಮಿತಿಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿರುವದು ಖಂಡನೀಯ ಎಂದು ಹುದಿಕೇರಿ ಮಾದರಿ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಿ.ಬಿ. ಬೆಳ್ಳಿ ಆರೋಪಿಸಿದ್ದಾರೆ.
ಕಳೆದ ಶೈಕ್ಷಣಿಕ ವರ್ಷದ ಅಂತಿಮ ಪರೀಕ್ಷೆ ಸಂದರ್ಭ 5 ನೇ ತರಗತಿ ವಿದ್ಯಾರ್ಥಿಗಳಿಂದ 6 ನೇ ತರಗತಿಯ ವಿದ್ಯಾರ್ಥಿಗಳ ಹೆಸರಿನಲ್ಲಿ ಪರೀಕ್ಷೆ ಬರೆಸುವ ಮೂಲಕ, ನಿಯಮ ಉಲ್ಲಂಘಿಸಿದನ್ನು ತಾನು ಪ್ರಶ್ನಿಸಿದ್ದ ಕಾರಣಕ್ಕಾಗಿ ತನ್ನನ್ನು ಕಡೆಗಣಿಸಿ ಬೇರೆ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ ಎಂದು ಗೋಣಿಕೊಪ್ಪ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಹುದಿಕೇರಿ ಗ್ರಾಮ ಪಂಚಾಯಿತಿ ವತಿಯಿಂದ ಆಯ್ಕೆ ನಡೆದಿದ್ದು, ಸಭೆಯ ವೇದಿಕೆಗೆ ತನ್ನನ್ನು ಕರೆಯದೇ ಅವರದೇ ಇಚ್ಚೆಯಂತೆ ಆಯ್ಕೆ ಮಾಡಿದ್ದಾರೆ. ಪಂಚಾಯಿತಿಗೆ ಆಯ್ಕೆ ಮಾಡುವ ಅಧಿಕಾರವಿಲ್ಲ. ತಾನು ಅಧ್ಯಕ್ಷನಾಗಿ ಆಯ್ಕೆಯಾಗಿ 10 ತಿಂಗಳಷ್ಟೆ ಕಳೆದಿದೆ. ಇನ್ನೂ 2 ವರ್ಷ 2 ತಿಂಗಳು ಅಧ್ಯಕ್ಷನಾಗಿ ಮುಂದುವರಿಯಬೇಕಿದ್ದರೂ, ಯರವ ಎಂಬ ಕಾರಣಕ್ಕೆ ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಯರವ ಜನಾಂಗ ಮುಖಂಡ ವೈ. ಬಿ. ಗಪ್ಪು ಮಾತನಾಡಿ, ನಮ್ಮ ಜನಾಂಗದಲ್ಲಿ ಶಿಕ್ಷಣದ ಕೊರತೆ ಇದೆ. ಪದವೀಧರನಾಗಿರುವ ಬೆಳ್ಳಿಗೆ ಶಾಲೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡದಿರುವದು ಯರವ ಜನಾಂಗದವರನ್ನು ಕಡೆಗಣಿಸುವಂತಾಗಿದೆ. ಇದು ಖಂಡನೀಯ ಎಂದರು.