ಕುಶಾಲನಗರ, ಜು. 5: ಪ್ರತಿಯೊಬ್ಬರೂ ಋಣಾತ್ಮಕ ಚಿಂತನೆಗಳಿಂದ ದೂರವಿರಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ರಮೇಶ್ ಕರೆ ನೀಡಿದ್ದಾರೆ. ಸಮೀಪದ ಕೊಪ್ಪ ಸಮುದಾಯ ಕೇಂದ್ರದಲ್ಲಿ ನಡೆದ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಸಾಮಾಜಿಕ ಬಡತನ ಹೋಗಲಾಡಿಸುವಲ್ಲಿ ಸಂಘ-ಸಂಸ್ಥೆಗಳು ಕಾರ್ಯೋನ್ಮುಖವಾಗಬೇಕಾಗಿದೆ ಎಂದು ತಿಳಿಸಿದರು.

ಒಕ್ಕೂಟದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕವಿತಾ ಮತ್ತು ತಂಡಕ್ಕೆ ಶುಭ ಹಾರೈಸಿದ ರಮೇಶ್, ಕಳೆದ 2 ವರ್ಷಗಳಿಂದ ಉತ್ತಮವಾಗಿ ಕಾರ್ಯಚಟುವಟಿಕೆ ನಡೆಸಿದ ರತ್ನಮ್ಮ ತಂಡವನ್ನು ಶ್ಲಾಘಿಸಿದರು.

ಸಮಾರಂಭ ಉದ್ಘಾಟಿಸಿದ ಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಸ್. ಶಿವಪ್ರಕಾಶ್ ನೂತನ ತಂಡಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿದರು.

ಸಭೆಗೂ ಮುನ್ನ ಸ್ಥಳೀಯ ಆರೋಗ್ಯ ಸಮುದಾಯ ಕೇಂದ್ರದ ಆವರಣದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಡಲಾಯಿತು. ಸಮಿತಿಯ ಕೊಪ್ಪ ವಲಯ ಮೇಲ್ವಿಚಾರಕ ಉಮೇಶ್, ಸಮಿತಿಯ ಸೇವಾ ಪ್ರತಿನಿಧಿಗಳಾದ ಮಂಜುಳಾ, ಲೀಲಾ ಮತ್ತಿತರರು ಇದ್ದರು.