ಗೋಣಿಕೊಪ್ಪಲು, ಜು. 5: ಜಿಲ್ಲೆಯ ಕಾಂಗ್ರೆಸ್ ಪಕ್ಷದ ಸರ್ವ ಕಾರ್ಯಕರ್ತರು ಒಂದುಗೂಡುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಕೊಡಗು ಜಿಲ್ಲಾ ಕಾಂಗ್ರೆಸ್‍ನ ನೂತನ ಜಿಲ್ಲಾಧ್ಯಕ್ಷ ಮುಕ್ಕಾಟೀರ ಶಿವು ಮಾದಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು.ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಲ್ಲಿನ ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಪ್ರತಿಯೊಬ್ಬರಿಗೂ ಮುಟ್ಟಿಸುವ ಕೆಲಸವಾಗಬೇಕು. ಬ್ಲಾಕ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವತ್ತ ಪ್ರತಿಯೊಬ್ಬರೂ ಹೆಜ್ಜೆ ಇಡಬೇಕು ಜಿಲ್ಲೆಯ ಎಲ್ಲಾ ಭಾಗದ ಕಾರ್ಯಕರ್ತರನ್ನು ಗಣನೆಗೆ ಪಡೆದು ವಿಶ್ವಾಸಾರ್ಹ ಪಕ್ಷವಾಗಿ ಕಟ್ಟಿ ಮುಂದಿನ ವಿದಾನಸಭಾ ಚುನಾವಣೆಯಲ್ಲಿ ಗೆಲುವು ಕಾಣುವ ಮೂಲಕ ರಾಜ್ಯ ನಾಯಕರು ಜಿಲ್ಲೆಯ ಮೇಲಿಟ್ಟಿರುವ ಅಭಿಪ್ರಾಯವನ್ನು ಸುಳ್ಳು ಎಂದು ಸಾಬೀತು ಮಾಡಿ ಜಿಲ್ಲೆಯ ಅಭಿವೃದ್ದಿಗೆ ಪಣ ತೊಡಬೇಕು. ರಾಜ್ಯ ಸರ್ಕಾರ ಪರಿಶಿಷ್ಟಜಾತಿ, ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಕಲ್ಯಾಣಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಇವುಗಳನ್ನು ಮತದಾರರಿಗೆ ಅರಿವು ಮೂಡಿಸುವ ಕೆಲಸವಾಗಬೇಕು. ರಾಜ್ಯದಲ್ಲಿರುವ ರೈತರ 50 ಸಾವಿರ ರೂಪಾಯಿ ಕೃಷಿ ಸಾಲವನ್ನು ಕಾಂಗ್ರೆಸ್ ಸರ್ಕಾರ ಮನ್ನಾ ಮಾಡುವ ಮೂಲಕ ರೈತರ ಅರ್ಥಿಕ ಸ್ಥಿತಿ ಸುಧಾರಿಸುವಂತೆ ಮಾಡಿದೆ. ಇದರಲ್ಲಿ ಜಿಲ್ಲೆಯ ರೈತ ಕುಟುಂಬಗಳು ಪ್ರಯೋಜನ ಪಡೆದುಕೊಂಡಿದ್ದಾರೆ ಇದನ್ನು ಮನಗಂಡು ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರಕ್ಕೆ ಅವಕಾಶ ನೀಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಮತದಾರರು ಬೆಂಬಲ ನೀಡಬೇಕೆಂದರು.

ಮಾಜಿ ಎಂಎಲ್‍ಸಿ ಅರುಣ್ ಮಾಚಯ್ಯ ಮಾತನಾಡಿ, ಪಕ್ಷದ ಮುಖಂಡರುಗಳು ಪಕ್ಷದ ಅಭಿವೃದ್ಧಿಗೆ ಸಮಯ ಮೀಸಲಿಡುವ ಮೂಲಕ ಮುಂದಿನ ಚುನಾವಣೆ ಗೆಲುವಿಗೆ ಪೂರಕ ಬೆಂಬಲ ನೀಡಬೇಕು. ಯಾವದೇ ಬಿನ್ನಾಭಿಪ್ರಾಯಗಳಿದ್ದರೂ ಪಕ್ಷದ ಹೆಸರಿಗೆ ಚ್ಯುತಿ ಬಾರದಂತೆ ಕೆಲಸ ಮಾಡಬೇಕು. ಉತ್ತಮ ಭಾರತ ನಿರ್ಮಾಣವಾಗಬೇಕಾದರೆ ಅದು ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ಸರ್ಕಾರವಿದ್ದಾಗ ನೂರಾರು ಜನಪರ ಕಾರ್ಯಗಳನ್ನು ಕೇಂದ್ರ ಮಟ್ಟದಲ್ಲಿ ಮಾಡಿತ್ತು. ಇಂದಿನ ಬಿಜೆಪಿ ಸರ್ಕಾರ ಬರೀ ಪ್ರಚಾರದ ಮೂಲಕ ಭರವಸೆ ನೀಡುತ್ತಿದೆ. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಬರಿ ಕನಸು ಮಾತ್ರ. ಅವರು ಮೊದಲು ಕಸಮುಕ್ತ ಭಾರತ ನಿರ್ಮಾಣ ಮಾಡಲಿ. ಸ್ವಚ್ಛ ಭಾರತ ನಿರ್ಮಾಣಕ್ಕಾಗಿ ಶೇ 2 ಸೇವಾ ಶುಲ್ಕ ನಿಗದಿ ಮಾಡಿದ್ದಾರೆ ಈ ಯೋಜನೆಯಿಂದ ಕೋಟ್ಯಾಂತರ ರೂಪಾಯಿ ಲಾಭ ಪಡೆದಿರುವ ಕೇಂದ್ರ ಸರ್ಕಾರ ಹಣವನ್ನು ಮಾತ್ರ ಸರಿಯಾಗಿ ವಿನಿಯೋಗಿಸಿಲ್ಲ. ಮುಂದಿನ ವಿದಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 2 ವಿಧಾನಸಭಾ ಕ್ಷೇತ್ರವನ್ನು ಗೆಲ್ಲಿಸಲು ಪ್ರತಿಯೊಬ್ಬ ಕಾರ್ಯಕರ್ತರು ಕೈಜೋಡಿಸಬೇಕು ಎಂದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಮಾತನಾಡಿ, ಯುವ ನಾಯಕನನ್ನು ಜಿಲ್ಲಾಧ್ಯಕ್ಷರಾಗಿ ಕೆಪಿಸಿಸಿ ಘೋಷಣೆ ಮಾಡುವ ಮೂಲಕ ಹೊಸತನಕ್ಕೆ ನಾಂದಿ ಹಾಡಿದೆÉ. ಯುವಕರಿಗೆ ಆದ್ಯತೆ ನೀಡಿ ಪಕ್ಷ ಬೆಳವಣಿಗೆಗೆ ಅವಕಾಶ ನೀಡಿದೆ. ಗ್ರಾಮ ಮಟ್ಟದಲ್ಲಿ ಕಾರ್ಯಕರ್ತರು ಒಂದಾಗಿ ಕೆಲಸ ಮಾಡುವ ಮೂಲಕ ಮುಂದಿನ ಚುನಾವಣೆ ಗೆಲ್ಲಬೇಕು. ಯಾವದೇ ಭಿನ್ನಾಭಿಪ್ರಾಯಗಳಿಗೆ ಅಸ್ಪದ ಮಾಡಿಕೊಡದೆ ಪಕ್ಷ ಕಟ್ಟಬೇಕು. ನೂತನ ಅಧ್ಯಕ್ಷರ ನೇಮಕದ ನಂತರ ವಿರೋಧ ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗಿದೆ; ಇದೀಗ ಅವರಲ್ಲಿ ಭಯ ಕೂಡ ಮೂಡಿದೆ ಎಂದರು.

ಕಾರ್ಯಕರ್ತರನ್ನು ಗಣನೆಗೆ ಪಡೆದು ಚುನಾವಣಾ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಪಕ್ಷ ಅಭಿವೃದ್ಧಿಗೊಳ್ಳಬೇಕಾದರೆ ಅದು ಕಾರ್ಯಕರ್ತರಿಂದ ಮಾತ್ರ ಸಾಧ್ಯ, ಈ ನಿಟ್ಟಿನಲ್ಲಿ ನಾಯಕರುಗಳು ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ಪಡೆದು ಕಾರ್ಯ ನಿರ್ವಹಿಸಬೇಕೆಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರೆಹಮಾನ್ ಬಾಪು ಹೇಳಿದರು.

ಬಿರುನಾಣಿ ರಸ್ತೆಗೆ ಮಾಜಿ ಸಂಸದ ವಿಶ್ವನಾಥ್ ಗ್ರಾಮ ಸಡಕ್ ಯೋಜನೆಯಡಿಯಲ್ಲಿ 5.50 ಕೋಟಿ ಅನುದಾನ ನೀಡಿದ್ದಾರೆ, ಆದರೆ ಬಿಜೆಪಿ ಸಂಸದ ಹಾಗೂ ಶಾಸಕರುಗಳು ಇದು ಬಿಜೆಪಿ ಸರ್ಕಾರದ ಅನುದಾನ ಎಂದು ಹೇಳುತ್ತಿದ್ದಾರೆ. ಇದರಿಂದ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವು ಉಂಟಾಗಿದೆ, ಮುಂದಿನ ದಿನದಲ್ಲಿ ಈ ರೀತಿ ಆಗದಂತೆ ಎಚ್ಚರ ವಹಿಸಬೇಕೆಂದು ಬಿರುನಾಣಿ ಭಾಗದ ಮುಖಂಡ ಲಾಲಾ ಅಪ್ಪಯ್ಯ ಸಭೆಯ ಗಮನಕ್ಕೆ ತಂದರು.

ನೂತನವಾಗಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕರಾದ ಮುಕ್ಕಾಟೀರ ಶಿವುಮಾದಪ್ಪ, ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತಗೊಂಡ ಜಮ್ಮಡ ಸೋಮಣ್ಣ ಹಾಗೂ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಆಯ್ಕೆಯಾದ ಕುಸುಮಾ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಕೆ ಪೊನ್ನಪ್ಪ, ಅಹಮ್ಮದ್, ಕಾರ್ಯದರ್ಶಿ ವಾಸು ಕುಟ್ಟಪ್ಪ, ಹಿಂದುಳಿದ ವರ್ಗಗಳ ಅಧ್ಯಕ್ಷ ಕೊರಕುಟ್ಟೀರ ಸರಚಂಗಪ್ಪ, ಪರಿಶಿಷ್ಟ ಜಾತಿ ಹಾಗೂ ಪಂಗಡ ವಿಭಾಗದ ಅಧ್ಯಕ್ಷ ಮುರುಗಾ ಇದ್ದರು.