ಶ್ರೀಮಂಗಲ, ಜು. 6: ಪಶುವೈದ್ಯಾಧಿಕಾರಿ ಡಾ. ಬಿ.ಜಿ. ಗಿರೀಶ್ ಅವರು ಕರ್ತವ್ಯಕ್ಕೆಂದು ಕುಟ್ಟ ಬಳಿ ತೆರಳಿದ್ದ ಸಂದರ್ಭ ಬೈಕ್ ಮೇಲೆ ಕಾಡಾನೆ ಧಾಳಿ ನಡೆಸಿದ್ದು, ಅದೃಷ್ಟವಶಾತ್ ಬೈಕ್ ಬಿಟ್ಟು ಓಡಿ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಅವರ ಬೈಕ್ ಕಾಡಾನೆಗಳ ಧಾಳಿಗೆ ತುತ್ತಾಗಿ ಹಾನಿಯಾಗಿದೆ.ಶ್ರೀಮಂಗಲ ಪಶುವೈದ್ಯಾಧಿಕಾರಿಯಾಗಿರುವ ಡಾ. ಗಿರೀಶ್ ಕುಟ್ಟ, ಬಿರುನಾಣಿಯಲ್ಲಿ ಪಶುವೈದ್ಯಾಧಿಕಾರಿಗಳು ಇಲ್ಲದಿರುವದರಿಂದ ಈ ವ್ಯಾಪ್ತಿಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದು, ತಾ. 6 ರಂದು ಕುಟ್ಟ ಬೊಳ್ಳೇರ ಗೇಟ್ ಬಳಿ ಆಲಂದೋಡುವಿನಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡಿ ವಾಪಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ರಸ್ತೆ ಬದಿಯ ಕಾಫಿ ತೋಟದಿಂದ ಬೈಕ್ ಕಂಡು ಬೈಕ್‍ನ ಸಮೀಪ ಬರುತ್ತಿರುವ ಕಾಡಾನೆ ಬಗ್ಗೆ ಜಾಗೃತರಾದ ಅವರು ಎದುರಾದ ಅಪಾಯದಿಂದ ಪಾರಾಗಲು ಬೈಕ್ ಅನ್ನು ರಸ್ತೆಯಲ್ಲೇ ಬಿಟ್ಟು ಹಿಂದಕ್ಕೆ ಓಡಿದ್ದಾರೆ. ಈ ಸಂದರ್ಭ ಕೇವಲ 100 ಮೀಟರ್ ಅಂತರದಲ್ಲೇ ಕಾಡಾನೆ ಅಟ್ಟಿಸಿಕೊಂಡು ಬಂದಿದೆ. ಬೈಕ್ ರಸ್ತೆಯಲ್ಲಿ ಬಿಟ್ಟು ಓಡಿದ್ದರಿಂದ ಕಾಡಾನೆಗಳು ತನ್ನ ಮೇಲೆ ಗಮನ ಬಿಟ್ಟು ಬೈಕ್ ಮೇಲೆ ಕೇಂದ್ರೀಕರಿಸಿ ಬೈಕ್ ಮೇಲೆ ಧಾಳಿ ಮಾಡಿದೆ ಎಂದು ಡಾ. ಗಿರೀಶ್ ವಿವರಿಸಿದ್ದಾರೆ. ತದನಂತರ ಗ್ರಾಮಸ್ಥರು ಆಗಮಿಸಿದಾಗ ಕಾಡಾನೆಗಳು ಬೈಕ್ ಮೇಲೆ ಧಾಳಿ ಮಾಡಿ, ಹಾನಿ ಮಾಡಿರುವದು ಗೋಚರಿಸಿದೆ. ಅಲ್ಲೇ ಸಮೀಪ ಕಾಡಾನೆಗಳು ಬೀಡುಬಿಟ್ಟಿದ್ದು, ಗ್ರಾಮಸ್ಥರ ಗಮನಕ್ಕೆ ಬಂದಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಆಗಮಿಸಿ ಪರಿಶೀಲಿಸಿದರು.