ಸೋಮವಾರಪೇಟೆ, ಜು.6: ತಾಲೂಕು ದಲಿತ ಸಂಘಟನೆಗಳ ಒಕ್ಕೂಟ, ಜಿಲ್ಲಾ ಪ್ರಬುದ್ಧ ನೌಕರರ ಒಕ್ಕೂಟ, ಕೊಡ್ಲಿಪೇಟೆಯ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜು, ಬೆಂಗಳೂರಿನ ಈಸ್ಟ್ ಪಾಯಿಂಟ್ ಆಸ್ಪತ್ರೆ, ಕೊಡಗು ಮಹಾಬೋಧಿ ಪತ್ತಿನ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ತಾ. 9ರಂದು ಕೊಡ್ಲಿಪೇಟೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ದಲಿತ ಸಂಘಟನೆಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಟಿ.ಈ. ಸುರೇಶ್, ತಾ. 9ರಂದು ಕೊಡ್ಲಿಪೇಟೆಯ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಿಗ್ಗೆ 9.30 ರಿಂದ 3 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಈಸ್ಟ್ ಪಾಯಿಂಟ್ ಆಸ್ಪತ್ರೆಯ 23ಕ್ಕೂ ಅಧಿಕ ನುರಿತ ವೈದ್ಯರು ಭಾಗವಹಿಸಲಿದ್ದಾರೆ ಎಂದರು.
ಶಿಬಿರದಲ್ಲಿ ವೈದ್ಯಕೀಯ ಶಸ್ತ್ರ ಚಿಕಿತ್ಸೆ, ಮಕ್ಕಳ ಚಿಕಿತ್ಸೆ, ಹೃದಯ ಶಸ್ತ್ರ ಚಿಕಿತ್ಸೆ, ಸ್ತ್ರೀ ತಜ್ಞರು ಮತ್ತು ಪ್ರಸೂತಿ ತಜ್ಞರು, ದಂತ ಮತ್ತು ಕಣ್ಣಿನ ಚಿಕಿತ್ಸೆ, ಕೀಲು ಮತ್ತು ಮೂಳೆ ಚಿಕಿತ್ಸಾ ತಜ್ಞರುಗಳು ಭಾಗವಹಿಸಲಿದ್ದು, ಬಿಪಿಎಲ್ ಫಲಾನುಭವಿಗಳಿಗೆ ಶಸ್ತ್ರ ಚಿಕಿತ್ಸೆ, ರಕ್ತ ಪರೀಕ್ಷೆ ಉಚಿತವಾಗಿದೆ. ಸರ್ಕಾರದ ವತಿಯಿಂದ ಆಸ್ಪತ್ರೆಯಲ್ಲಿಯೇ ವಾಜಪೇಯಿ ಆರೋಗ್ಯಶ್ರೀ ಯೋಜನೆ, ಯಶಸ್ವಿನಿ, ರಾಜೀವ್ ಆರೋಗ್ಯ ಭಾಗ್ಯ, ಜ್ಯೋತಿ ಸಂಜೀವಿನಿ, ಮುಖ್ಯಮಂತ್ರಿಗಳ ಸಾಂತ್ವಾನ ಹರೀಶ್ ಯೋಜನೆಗಳು ದೊರೆಯುತ್ತವೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿದ್ದ ಮಹಾಬೋಧಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಸಿ. ಸತೀಶ್ ಮಾತನಾಡಿ, ತಾ. 9ರಂದು ನಡೆಯುವ ಶಿಬಿರವನ್ನು ಉಚ್ಚ ನ್ಯಾಯಾಲಯದ ವಕೀಲ ಹೆಚ್.ಎಸ್. ಚಂದ್ರಮೌಳಿ ಉದ್ಘಾಟಿಸಲಿದ್ದು, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸುರೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಮಾಜೀ ಎಂಎಲ್ಸಿ ಎಸ್.ಜಿ. ಮೇದಪ್ಪ, ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ಜಿ.ಪಂ. ಮಾಜೀ ಸದಸ್ಯ ವಿ.ಪಿ. ಶಶಿಧರ್, ಡಾ. ದೇವದಾಸ್, ಡಾ. ಅರಿವಝಗನ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.
ಹೆಚ್ಚಿನ ಮಾಹಿತಿಗಾಗಿ ಮೊ:9448448119, 9483844578 ಸಂಪರ್ಕಿಸಬಹುದು ಎಂದರು. ಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಖಜಾಂಚಿ ಎಸ್.ಎ. ಪ್ರತಾಪ್, ದಸಂಸ ಮುಖಂಡ ರಾಮಕೃಷ್ಣ ಅವರುಗಳು ಉಪಸ್ಥಿತರಿದ್ದರು.