ಮಡಿಕೇರಿ, ಜು. 6: ಮನೆಗಳಲ್ಲಿ ಗ್ರಾಹಕರು ಬಳಸುವ ವಿದ್ಯುತ್ ಉಪಯೋಗದ ಕುರಿತು ಮೀಟರ್ ರೀಡಿಂಗ್ ಮೂಲಕ ಖಾಸಗಿ ಏಜೆನ್ಸಿಯೊಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಸೆಸ್ಕ್) ಹಾಗೂ ವಿದ್ಯುತ್ ಬಳಕೆದಾರರಿಗೆ (ಗ್ರಾಹಕ) ಏಕ ಕಾಲಕ್ಕೆ ವಂಚಿಸುತ್ತಿರುವ ಅಂಶ ತಡವಾಗಿ ಬಹಿರಂಗಗೊಂಡಿದೆ. ಈ ವಂಚನೆಯ ದಂಧೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳೇ ಶಾಮೀಲಾಗಿರುವ ಆರೋಪ ಕೇಳಿಬರತೊಡಗಿದೆ.
ಕೊಡಗು ಜಿಲ್ಲೆಯಲ್ಲಿ ಗ್ರಾಹಕರು ಬಳಸುವ ವಿದ್ಯುತ್ ಬಾಬ್ತು ನೇರವಾಗಿ ಇಲಾಖೆಯ ಸಿಬ್ಬಂದಿ, ಯಾರೊಬ್ಬರ ಮನೆ ಅಥವಾ ಅಂಗಡಿ, ಕೈಗಾರಿಕೋದ್ಯಮಗಳಿಗೆ ತೆರಳಿ ಮೀಟರ್ನಲ್ಲಿ ನಮೂದಾಗಿರುವ ವಿದ್ಯುತ್ ಬಳಕೆಯ ಮಾಹಿತಿ ಕಲೆ ಹಾಕಿ ಸಂಬಂಧಪಟ್ಟ ಮಾಲೀಕರಿಗೆ ಬಿಲ್ಗಳನ್ನು ನೀಡುತ್ತಿಲ್ಲ. ಬದಲಾಗಿ ‘ಐಡಿಯಾ ಇನ್ಫಿನಿಟಿ ಸಲ್ಯೂಷನ್’ ಬೆಂಗಳೂರು ಎಂಬ ಖಾಸಗಿ ಏಜೆನ್ಸಿ ಈ ಕೆಲಸಕ್ಕೆ ಗುತ್ತಿಗೆ ಪಡೆದುಕೊಂಡು ಎರಡು ವರ್ಷಗಳು ಕಳೆದು ಹೋಗಿವೆ.
ಈ ಏಜೆನ್ಸಿಯು ಜಿಲ್ಲೆಯಾದ್ಯಂತ ವಿದ್ಯುತ್ ಗ್ರಾಹಕರ ಮನೆಗಳಿಗೆ ತೆರಳಿ ತಾನು ನಿಯೋಜಿಸಿಕೊಂಡ ಸಿಬ್ಬಂದಿ ಮೂಲಕ, ಪ್ರತಿ ತಿಂಗಳು ಮೀಟರ್ ಗಳನ್ನು ಪರಿಶೀಲಿಸಿ, ಗ್ರಾಹಕರು ಬಳಕೆ ಮಾಡಿರುವ ವಿದ್ಯುತ್ ಖರ್ಚಿಗೆ ಪೂರಕ ಮೊತ್ತದ ಬಿಲ್ಗಳನ್ನು ನೀಡಬೇಕು. ಅಲ್ಲದೆ ಈ ಮುಖಾಂತರ ಗ್ರಾಹಕರಿಂದ ಹಣವನ್ನು ಸಂಗ್ರಹಿಸಿ, ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮಕ್ಕೆ ಆಯಾ ವ್ಯಾಪ್ತಿಯಲ್ಲಿರುವ ಕಚೇರಿಗಳ ಮೂಲಕ ಹಣ ಸಂದಾಯ ಮಾಡಬೇಕು. ಈ ರೀತಿ ಸರಕಾರ ಅಥವಾ ಇಲಾಖೆ ಹಾಗೂ ಗ್ರಾಹಕರಿಗೆ ಸಕಾಲದಲ್ಲಿ ವ್ಯವಸ್ಥೆ ಕಲ್ಪಿಸಿ, ಯಾರಿಗೂ ಹೊರೆಯಾಗದಂತೆ ಕೆಲಸ ನಿರ್ವಹಿಸಬೇಕು. ಆದರೆ ಜಿಲ್ಲೆಯ ಗುತ್ತಿಗೆ ಏಜೆನ್ಸಿಯಿಂದ ಇಲ್ಲಿ ಗ್ರಾಹಕರು ಮತ್ತು ಸಂಬಂಧಿಸಿದ ಇಲಾಖೆ ನಷ್ಟ ಅನುಭವಿಸುವಂತಾಗಿದೆ ಎಂಬ ಸಂಗತಿ ಬಹಿರಂಗಗೊಂಡಿದೆ.
1.87 ಲಕ್ಷ ಗ್ರಾಹಕರು : ವಿಶ್ವಾಸನೀಯ ಮೂಲಗಳ ಪ್ರಕಾರ ಕೊಡಗು ಜಿಲ್ಲೆಯಲ್ಲಿ 1.87 ಲಕ್ಷ ಮಂದಿಗೂ ಅಧಿಕ ವಿದ್ಯುತ್ ಬಳಕೆದಾರರಿದ್ದಾರೆ. ಈ ವಿದ್ಯುತ್ ಬಳಕೆದಾರರ ಪ್ರತಿ ಮನೆಗೆ ಮಾಸಾಂತ್ಯದೊಳಗೆ ಏಜೆನ್ಸಿ ಸಿಬ್ಬಂದಿ ತೆರಳಿ ಖುದ್ದು ಮೀಟರ್ ಪರಿಶೀಲಿಸಿ ಬಿಲ್ ನೀಡಬೇಕು. ಈ ರೀತಿ ಸುಸೂತ್ರವಾಗಿ ಕೆಲಸ ನಿರ್ವಹಿಸಿದರೆ, ಆಯಾ ತಿಂಗಳು ವಿದ್ಯುತ್ ಬಳಕೆಯಾಗಿದ್ದಕ್ಕೆ ಪೂರಕವಾಗಿ ಗ್ರಾಹಕ ಕೂಡ ಸಂಬಂಧಿಸಿದ ಇಲಾಖೆಗೆ ಹಣ ಪಾವತಿಸುತ್ತಾನೆ. ಆತನಿಗೆ ಯಾವದೇ ಹೊರೆ ಎನಿಸುವದಿಲ್ಲ.
ಇಲ್ಲಿ ನಡೆಯುವದೇ ಬೇರೆ : ಆದರೆ ಏಜೆನ್ಸಿ ಮಂದಿ ಎಲ್ಲೋ ಬೆಂಗಳೂರು ಅಥವಾ
(ಮೊದಲ ಪುಟದಿಂದ) ಮೈಸೂರಿನಲ್ಲಿ ಕುಳಿತುಕೊಂಡು ಗಣಕಯಂತ್ರದ ಮೂಲಕ ಗ್ರಾಹಕರ ವಿದ್ಯುತ್ ಬಳಕೆಯ ಲೆಕ್ಕಾಚಾರ ಮಾಡಿ, ಲೈನ್ಮನ್ಗಳನ್ನು ಬಳಸಿಕೊಂಡು ಹಣ ಪಾವತಿಸಿಲ್ಲವೆಂದು ಸಂಪರ್ಕ ಕಡಿತಗೊಳಿಸುವ ಬೆದರಿಕೆ ಯೊಡ್ಡುತ್ತಿದ್ದಾರೆ. ಗ್ರಾಹಕರು ದೂರದ ಗ್ರಾಮೀಣ ಭಾಗ ಸೇರಿದಂತೆ ಇತರೆಡೆಗಳಿಂದ ತಾವು ವಿದ್ಯುತ್ ಬಿಲ್ಗಿಂತ ಹೆಚ್ಚಿನ ಮೊತ್ತದ ಪ್ರಯಾಣ ಭತ್ಯೆ ಇತ್ಯಾದಿ ಖರ್ಚು ಮಾಡಿಕೊಂಡು ಬಂದು ಹಣ ಪಾವತಿಸಿ ತೆರಳುತ್ತಾರೆ, ಎಷ್ಟೋ ಸಂದರ್ಭ ವಿದ್ಯುತ್ ಬಳಕೆಯ ಮೊತ್ತಕ್ಕಿಂತ ದುಪ್ಪಟ್ಟು ವಸೂಲಿ ನಡೆದಿದ್ದರೂ, ಅವರಿಗೆ ನಿಖರ ಮಾಹಿತಿ ಲಭಿಸುವದಿಲ್ಲ.
ಕುಳಿತಲ್ಲೇ ಸುಲಿಗೆ : ಅತ್ತ ಏಜೆನ್ಸಿ ಮಂದಿ ಮಾತ್ರ ಸರಕಾರದ ಹಣವನ್ನು ಕುಳಿತಲ್ಲೇ ಕೊಳ್ಳೆ ಹೊಡೆಯುತ್ತಾ, ಗ್ರಾಹಕರಿಂದ ಹಾಗೂ ಇಲಾಖೆಯಿಂದ ಕೇವಲ ಹಣ ಗಳಿಕೆಯ ದಂಧೆಯಲ್ಲಿ ತೊಡಗಿರುವದಾಗಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತಗೊಳ್ಳತೊಡಗಿದೆ, ಈಚೆಗೆ ವೀರಾಜಪೇಟೆ ವ್ಯಾಪ್ತಿಯಲ್ಲಿ ಉದ್ಯಮಿಯೊಬ್ಬರಿಗೆ ರೂ. 5 ಲಕ್ಷ ಮೊತ್ತದ ವಿದ್ಯುತ್ ಬಿಲ್ ನೀಡಿದ್ದು, ಬೇರೊಬ್ಬರಿಗೆ ರೂ. 3 ಲಕ್ಷದ ಬಿಲ್ ನೀಡಿ ಸಂಬಂಧಿಸಿದವರು ಗ್ರಾಹಕರ ವೇದಿಕೆ ಮೆಟ್ಟಿಲೇರಿದ ಪ್ರಸಂಗ ಕೂಡ ನಡೆದಿದೆ.
ಕಮಿಷನ್ ದಂಧೆ : ಬೆಂಗಳೂರಿನ ‘ಐಡಿಯಾ ಇಸ್ಫಿನಿಟಿ ಸಲ್ಯೂಷನ್’ ಏಜೆನ್ಸಿ ಮಂದಿ ಜಿಲ್ಲೆಯಲ್ಲಿ ಮನೆ ಮನೆ ತೆರಳಿ ಗ್ರಾಹಕರಿಂದ ಪ್ರತಿ ತಿಂಗಳು ವಿದ್ಯುತ್ ಬಿಲ್ ಸಂಗ್ರಹಿಸದಿದ್ದರೂ, ಸರಕಾರದಿಂದ 1.87 ಲಕ್ಷ ಗ್ರಾಹಕರ ಲೆಕ್ಕದಲ್ಲಿ ಪ್ರತಿ ಮನೆಗೆ ರೂ. 9.40 ರಿಂದ 11 ರೂ. ಗಳಿಗೂ ಅಧಿಕ ಮೊತ್ತವನ್ನು ಹೊಂದಿಕೊಳ್ಳುತ್ತಿರುವ ಆರೋಪವಿದೆ. ಗ್ರಾಹಕ ತಾನು ನೇರವಾಗಿ ಸೆಸ್ಕ್ ಕಚೇರಿಗೆ ಅಲೆದು ಬಿಲ್ ಹಣ ಪಾವತಿಸುತ್ತಿದ್ದರೂ ಈ ಮಂದಿಗೆ ಕುಳಿತಲ್ಲಿಗೆ ಕಮಿಷನ್ ದೊರಕಲಿದೆ.
ಇತ್ತ ಗ್ರಾಹಕ ಮಾತ್ರ ತನಗೆ ವಿದ್ಯುತ್ ಬಿಲ್ ಬಂದಿಲ್ಲವೆಂದು ಒಂದೆರಡು ತಿಂಗಳು ಕಾಯ್ದು ಸುಸ್ತಾಗಿ ತಾನೇ ಇಲಾಖೆಗೆ ‘ಮೀಟರ್ ರೀಡಿಂಗ್’ ಬರೆದುಕೊಂಡು ಹೋಗಿ ಹಣ ಪಾವತಿಸಿದರೂ, ಸಕಾಲದಲ್ಲಿ ಪಾವತಿಸದ ಕಾರಣ ನೀಡಿ ಶೇಕಡವಾರು ಬಡ್ಡಿ ಸಹಿತ ಹಣ ಕಟ್ಟಿಸಿಕೊಳ್ಳಲಾಗುತ್ತಿದೆ. ಹೀಗೆ ಪ್ರಸಕ್ತ ಜಿಲ್ಲೆಯಲ್ಲಿ ಸುಮಾರು 1,88,500 ಕ್ಕೂ ಅಧಿಕ ಮಂದಿ ವಿದ್ಯುತ್ ಬಳಕೆದಾರರು ಇದ್ದು, ಏಜೆನ್ಸಿ ಮಂದಿ ಮಾತ್ರ ತೋರಿಕೆಗೆ ಕೈ ಬೆರಳೆಣಿಕೆಯಷ್ಟು ನೌಕರರನ್ನು ಇರಿಸಿಕೊಂಡು ಕೊಡಗಿನಲ್ಲಿ ಕರೆಂಟ್ ಲೆಕ್ಕದಲ್ಲೂ ನುಂಗುತ್ತಿರುವ ವಂಚನೆ ಜಾಲವೊಂದು ಕಾರ್ಯಾಚರಿ ಸುತ್ತಿರುವದು ಖಾತರಿಯಾಗಿದೆ. ಇಲ್ಲಿ ವಿದ್ಯುತ್ ಅನಿವಾರ್ಯತೆ ನಡುವೆ ತಾನು ಮೋಸ ಹೋಗುತ್ತಿರುವ ಪರಿ ಮಾತ್ರ ಗ್ರಾಹಕನಿಗೆ ತಿಳಿಯದಾಗಿದೆ ಎನ್ನುವದು ವಿಪರ್ಯಾಸವಷ್ಟೆ.-ಶ್ರೀ ಸುತ