ಮಡಿಕೇರಿ, ಜು. 6: ಚೆಯ್ಯಂಡಾಣೆ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ 13800 ಚೀಲಗಳಿಗೂ ಅಧಿಕ ಗೊಬ್ಬರ ಮೂಟೆಗಳ ಹಗರಣ ಸಂಬಂಧ ಸಹಕಾರ ಇಲಾಖೆಯ ವತಿಯಿಂದ ತನಿಖೆ ಆರಂಭಗೊಂಡಿದೆ. ನಿನ್ನೆ ಇಲಾಖೆಯ ಸಿಬ್ಬಂದಿ ವಿಎಸ್‍ಎಸ್‍ಎನ್‍ಗೆ ಖುದ್ದು ಭೇಟಿ ನೀಡಿ ಕಚೇರಿಯ ದಾಖಲಾತಿಗಳ ತಪಾಸಣೆ ನಡೆಸಿದ್ದಾರೆ.ಅಲ್ಲದೆ ಗೊಬ್ಬರ ದಾಸ್ತಾನು ಲೆಕ್ಕಾಚಾರದಲ್ಲಿ ಸಾವಿರಾರು ಮೂಟೆ ಗೊಬ್ಬರ ನಾಪತ್ತೆ ಸಂಬಂಧ, ಈಗಾಗಲೇ ಆಡಳಿತ ಮಂಡಳಿಯಿಂದ ತನಿಖೆಗೆ ಕೋರಿ ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ, ಈ ಕುರಿತು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ಪ್ರಾಥಮಿಕ ಹಂತದ ಪರಿಶೀಲನೆಯಲ್ಲಿ ತೊಡಗಿರುವದಾಗಿ ಗೊತ್ತಾಗಿದೆ. ಮೂಲಗಳ ಪ್ರಕಾರ ವಿಎಸ್‍ಎಸ್‍ಎನ್ ಕಚೇರಿಯ ಕಡತದಲ್ಲಿ ನಮೂದಾಗಿರುವ ಗೊಬ್ಬರ ದಾಸ್ತಾನು ಲೆಕ್ಕ ಹಾಗೂ ಮಾರಾಟಗಾರರಿಂದ ವಿಎಸ್‍ಎಸ್‍ಎನ್ ಹೊಂದಿ ಕೊಂಡಿರುವ ಗೊಬ್ಬರ ಪ್ರಮಾಣದ (ಇನ್ವಾಯ್ಸ್) ಸ್ವೀಕೃತ ದಾಸ್ತಾನು ಪತ್ರಗಳಿಗೂ

(ಮೊದಲ ಪುಟದಿಂದ) ಯಾವ ಹೊಲಿಕೆಯೂ ಕಂಡು ಬರುತ್ತಿಲ್ಲವೆಂದು ತಿಳಿದು ಬಂದಿದೆ. ಅಲ್ಲದೆ, ಜೂನ್ ತಿಂಗಳು ಯಾವದೇ ಗೊಬ್ಬರ ಪೂರೈಕೆಗೊಳ್ಳದಿದ್ದರೂ, ಸುಮಾರು ರೂ. 7 ಲಕ್ಷದ ಬಿಲ್ ಮೊತ್ತ ಪಾವತಿಗೆ ಕಾರ್ಯದರ್ಶಿ ಆಡಳಿತ ಮಂಡಳಿಗೆ ಬೇಡಿಕೆ ಇಟ್ಟಿದ್ದು, ಇಡೀ ಹಗರಣ ಬಹಿರಂಗಗೊಳ್ಳಲು ಕಾರಣವಾಯಿತು ಎನ್ನಲಾಗಿದೆ.

ಇಂದು ಮಹತ್ವದ ಸಭೆ

ಚೆಯ್ಯಂಡಾಣೆ ವಿಎಸ್‍ಎಸ್‍ಎನ್‍ನಲ್ಲಿ ಗೊಬ್ಬರ ನಾಪತ್ತೆ ಹಗರಣ ಸ್ಫೋಟಗೊಂಡ ಬಳಿಕ ತಾ. 7 ರಂದು (ಇಂದು) ಆಡಳಿತ ಮಂಡಳಿ ಸಭೆ ನಡೆಯಲಿದ್ದು, ಹಗರಣ ಸಂಬಂಧ ಮಹತ್ವದ ತೀರ್ಮಾನ ಕೈಗೊಳ್ಳಲಿದೆ ಎಂದು ಮೂಲಗಳಿಂದ ಗೊತ್ತಾಗಿದೆ.