*ಗೋಣಿಕೊಪ್ಪ, ಜು. 6: 2017-18ನೇ ಸಾಲಿನ ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆ ಯಡಿಯಲ್ಲಿ ತಲಾ 20 ಸಾವಿರ ರೂ.ಗಳ 4 ಲಕ್ಷ ಮೊತ್ತದ ಚೆಕ್ಕನ್ನು ಸುಮಾರು 30ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸಂಸದ ಪ್ರತಾಪ್ ಸಿಂಹ ವಿತರಿಸಿದರು. ಪೊನ್ನಂಪೇಟೆ ತಾ.ಪಂ. ಸಾಮಥ್ರ್ಯ ಸೌಧದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಚೆಕ್ಕನ್ನು ನೀಡಿದರು. ಸಾಮಾಜಿಕ ನೆರವು ಯೋಜನೆ ಯಡಿಯಲ್ಲಿ ಈ ಹಿಂದೆ 10 ಸಾವಿರ ರೂ.ಗಳನ್ನು ನೀಡಲಾಗುತ್ತಿತ್ತು. ಆದರೆ ಮೋದಿ ಸರಕಾರ ಮಹಿಳೆಯರ ಹಿತದೃಷ್ಟಿಯಿಂದ 20 ಸಾವಿರ ರೂ.ಗಳನ್ನು ಏರಿಕೆ ಮಾಡಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್, ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ತಾಲೂಕು ಫೆಡರಲ್ ಉಪಾಧ್ಯಕ್ಷ ಮಧು ದೇವಯ್ಯ, ತಹಶೀಲ್ದಾರ್ ಗೋವಿಂದ ರಾಜು, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕಿರಣ್ ಪೆಡ್ನೇಕರ್, ಪೆಟ್ರೋಲಿಯಂ ಮತ್ತು ಪ್ರಾಕೃತಿಕ ಅನಿಲ ಖಾತೆ ಅಧಿಕಾರಿ ಮಹೇಂದ್ರ ಡೋಂಗ್ರೆ ಹಾಜರಿದ್ದರು.