ಸೋಮವಾರಪೇಟೆ, ಜು.5 : ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಲಾಗಿರುವ ಅಂಗಡಿ ಮಳಿಗೆಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ಅನೇಕ ತಿಂಗಳುಗಳಿಂದ ಬಾಡಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದ ಎರಡು ಮಳಿಗೆಗಳಿಗೆ ಪಂಚಾಯಿತಿ ಅಧಿಕಾರಿಗಳು ಬೀಗ ಜಡಿದಿದ್ದಾರೆ.

ಹರಾಜಿನ ಮೂಲಕ ಪಡೆದುಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದ ಇಲ್ಲಿನ ಕ್ಲಬ್ ರಸ್ತೆ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿರುವ ತಲಾ ಒಂದೊಂದು ಮಳಿಗೆಗೆ ಅಧಿಕಾರಿಗಳು ಬೀಗ ಜಡಿದರು. ಇದರೊಂದಿಗೆ ಅನೇಕ ಬಾರಿ ಸೂಚನೆ ನೀಡಿದ್ದರೂ ಬಾಡಿಗೆ ಪಾವತಿಸದ ಹಲವು ಅಂಗಡಿ ಮಾಲೀಕರು ಪಂಚಾಯಿತಿಯ ದಿಟ್ಟ ಕ್ರಮಕ್ಕೆ ಬೆದರಿ ಸ್ಥಳದಲ್ಲೇ ಬಾಡಿಗೆ ಪಾವತಿಸಿದರು.

ಪಂಚಾಯಿತಿಗೆ ಕಳೆದ ಮಾರ್ಚ್ ಅಂತ್ಯಕ್ಕೆ ಒಟ್ಟಾರೆ 15 ಲಕ್ಷ ಬಾಡಿಗೆ ಸಂದಾಯವಾಗಬೇಕಿದ್ದು, ಮಾಲೀಕರುಗಳು ಬಾಡಿಗೆ ಪಾವತಿಸದ ಹಿನ್ನೆಲೆ ಪ.ಪಂ. ಆದಾಯಕ್ಕೆ ಬ್ರೇಕ್ ಬಿದ್ದಿತ್ತು. ಈ ಬಗ್ಗೆ ಹಲವು ಸಾಮಾನ್ಯ ಸಭೆಗಳಲ್ಲಿ ಗಂಭೀರ ಚರ್ಚೆ ನಡೆದು ವಾಗ್ವಾದಕ್ಕೂ ಕಾರಣವಾಗಿತ್ತು.

ಇದೀಗ ಬಾಡಿಗೆ ಪಾವತಿಸದ ಅಂಗಡಿಗಳ ಮೇಲೆ ಕ್ರಮಕ್ಕೆ ಮುಂದಾಗಿದ್ದು, ಎರಡು ದಿನಗಳಲ್ಲಿ ಅಧಿಕಾರಿಗಳು 2.70 ಲಕ್ಷ ಬಾಡಿಗೆ ವಸೂಲಿ ಮಾಡಿದ್ದಾರೆ. ಉಳಿದವರಿಗೆ ನೋಟೀಸ್ ಜಾರಿ ಮಾಡಿದ್ದು, ಕಟ್ಟದಿದ್ದಲ್ಲಿ ಬೀಗ ಜಡಿದು ವಸೂಲಿಗೆ ಕ್ರಮ ಕೈಗೊಳ್ಳಲಾಗುವದು ಎಂದು ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದ್ದಾರೆ.

ಬಾಡಿಗೆ ವಸೂಲಿ ಸಂದರ್ಭ ಪಟ್ಟಣ ಪಂಚಾಯಿತಿಯ ಪ್ರಥಮ ದರ್ಜೆ ಸಹಾಯಕ ಡಿಸೋಜ, ದ್ವಿತೀಯ ದರ್ಜೆ ಸಹಾಯಕ ರಫೀಕ್ ಅಹಮ್ಮದ್, ಅಭಿಯಂತರ ಸುಜಿತ್, ಬಿಲ್ ಕಲೆಕ್ಟರ್ ಲೋಕೇಶ್, ಸಿಬ್ಬಂದಿ ಹನುಮ ಅವರುಗಳು ಪಾಲ್ಗೊಂಡಿದ್ದರು.