ಸೋಮವಾರಪೇಟೆ, ಜು. 5: ಭಾರತದಲ್ಲಿ ಅನಾದಿಕಾಲದಿಂದಲೂ ಪ್ರಕೃತಿಯನ್ನು ಪೂಜಿಸುತ್ತಾ ಬಂದಿದ್ದರ ಫಲವಾಗಿ ಇಂದು ಉತ್ತಮ ಪರಿಸರ ಹೊಂದಿ ಸಂಪತ್ಬರಿತ ರಾಷ್ಟ್ರವಾಗಿ ಉಳಿದಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು.

ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಮಂತ್ರಿಮಂಡಲವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ರಾಷ್ಟ್ರದ ಆಚಾರ-ವಿಚಾರಗಳಿಗೆ ತನ್ನದೇ ಆದ ಇತಿಹಾಸವಿದೆ. ನಮ್ಮ ಪೂರ್ವಜರು ಕಲ್ಲು, ಮರ-ಗಿಡ, ಭೂಮಿ, ನೀರು ಸೇರಿದಂತೆ ಪ್ರಕೃತಿಯನ್ನು ಪೂಜಿಸುತ್ತಿದ್ದಾಗ ವಿದೇಶಿಗರು ನಮ್ಮನ್ನು ಮೂರ್ಖರೆಂದು ಮೂದಲಿಸುತ್ತಿದ್ದ ಕಾಲವಿತ್ತು. ಆದರೆ ಅದೇ ವಿದೇಶಿಗರಿಂದು ನಮ್ಮಲ್ಲಿ ಪೂಜಿಸುತ್ತಾ ಉಳಿಸಿಕೊಂಡು ಬಂದ ಪರಿಸರವನ್ನು ಕಂಡು ನಮ್ಮ ಸಂಸ್ಕøತಿಯನ್ನು ಕೊಂಡಾಡುತ್ತಿದ್ದಾರೆ ಎಂದರು.

ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ನಾಯಕತ್ವ, ಆಡಳಿತ ಗುಣವನ್ನು ಮೈಗೂಡಿಸಿಕೊಳ್ಳಲು ಶಾಲಾ ಮಂತ್ರಿ ಮಂಡಲಗಳು ಅತ್ಯುತ್ತಮ ವೇದಿಕೆಯಾಗಿದೆ. ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವ ಮೂಲಕ ಸಮರ್ಥರೆನಿಸಿಕೊಳ್ಳಬೇಕೆಂದು ಕರೆ ನೀಡಿದರು.

ವಿದ್ಯಾರ್ಥಿ ಮಂತ್ರಿ ಮಂಡಲದ ಮಂತ್ರಿಗಳಿಗೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಅವರು ಪ್ರಮಾಣ ವಚನ ಬೋಧಿಸಿದರು. ಶಾಲಾ ಮುಖ್ಯಮಂತ್ರಿಯಾಗಿ ಟಿ.ಪಿ. ರಂಜಿತ್, ಉಪ ಮುಖ್ಯಮಂತ್ರಿಯಾಗಿ ಬಿ.ಆರ್. ಅರ್ಪಿತಾ, ಗೃಹಮಂತ್ರಿಯಾಗಿ ಎ.ಕೆ. ದರ್ಶಿಕ್, ಸ್ವಚ್ಛತಾ ಮಂತ್ರಿಯಾಗಿ ಬಿ.ಸಿ. ಈಶ್ವರ್, ಕ್ರೀಡಾಮಂತ್ರಿಯಾಗಿ ಎಂ. ಪ್ರೀತಂ, ವಾರ್ತಾ ಮಂತ್ರಿಯಾಗಿ ಸಿ.ಯು. ಪ್ರೀತಿ, ಸಾಂಸ್ಕøತಿಕ ಮಂತ್ರಿಯಾಗಿ ರಕ್ಷಿತಾ ಆಳ್ವ, ಆಹಾರ ಮತ್ತು ಆರೋಗ್ಯ ಮಂತ್ರಿಯಾಗಿ ಜಿ.ಕೆ. ಶಿವು ಅವರುಗಳು ವಿದ್ಯಾ ದೇವತೆ ಸರಸ್ವತಿಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್, ತಾಲೂಕು ಪಂಚಾಯಿತಿ ಸದಸ್ಯೆ ತಂಗಮ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕುಶಾಲ, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ, ಶಾಲಾ ಮುಖ್ಯಶಿಕ್ಷಕಿ ಅಣ್ಣಮ್ಮ ಉಪಸ್ಥಿತರಿದ್ದರು.