ನವದೆಹಲಿ, ಜು. 6: ಸುಮಾರು 1 ತಿಂಗಳಿನಿಂದೀಚೆ ಚೀನಾ ಭಾರತದೊಂದಿಗೆ ನೆಪಗಳನ್ನು ಒಡ್ಡುತ್ತ ಗಡಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗು ವಂತಹ ಪ್ರಚೋದÀನಾತ್ಮಕ ಕೃತ್ಯ ಎಸಗುತ್ತಿದೆ. ಜೂನ್ 6 ರಂದು ಸಿಕ್ಕಿಂ ವಲಯದಲ್ಲಿ ಭಾರತ ಸೇನೆಯ ಬಂಕರ್‍ಗಳನ್ನು ನಾಶ ಮಾಡಿ ಭಾರತವನ್ನು ಕೆಣಕುತ್ತ ಬಂದಿರುವ ಚೀನಾ ಇದೀಗ ಶಾಂತಿ ಮಾತುಕತೆ ಬದಲು ಭಾರತದೊಂದಿಗೆ ಸಮರ ಸನ್ನದ್ಧತೆಗೆ ಅಣಿಯಾಗುತ್ತಿದ್ದು, ಆತಂಕಕಾರಿ ಪರಿಸ್ಥಿತಿ ಸೃಷ್ಟಿಸಿದೆ.

ಹ್ಯಾಮ್ ಬರ್ಗ್‍ನಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿಜಿನ್ ಪಿಂಗ್ ಅವರು ದ್ವಿಪಕ್ಷೀಯ ಸಭೆ ನಡೆಸಲು ಇದು ಸೂಕ್ತ ಸಮಯ ಅಲ್ಲ ಎಂದು ಗುರುವಾರ ಚೀನಾ ತಾಕೀತು ಮಾಡಿದ್ದು, ಶಾಂತಿ ಮಾತುಕತೆ ಅಗತ್ಯವಿಲ್ಲವೆಂದು ಭಾರತಕ್ಕೆ ಸೆಡ್ಡು ಹೊಡೆದಿದೆ. ಸಿಕ್ಕಿಂನ ಭಾರತ-ಚೀನಾ ಗಡಿಯಲ್ಲಿ ಎರಡು ದೇಶಗಳ ಸೇನೆ ಮುಖಾಮುಖಿಯಾಗುವ ಮೂಲಕ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಕ್ಸಿಜಿನ್ ಪಿಂಗ್ ಅವರ ಭೇಟಿಗೆ ಇದು ಸೂಕ್ತ ಸಮಯ ಅಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಜರ್ಮನಿಯ ಹ್ಯಾಮ್ ಬರ್ಗ್‍ನಲ್ಲಿ ನಾಳೆಯಿಂದ ಜಿ20 ಶೃಂಗಸಭೆ ಆರಂಭವಾಗಲಿದೆ. ಶೃಂಗಸಭೆಗೂ ಮುನ್ನ ಭಾರತ, ಬ್ರಿಜೆಲ್, ರಷ್ಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳ ನಾಯಕರು ಅನೌಪಚಾರಿಕ ಮಾತುಕತೆಗಳನ್ನು ನಡೆಸಲಿದ್ದಾರೆಂದು ತಿಳಿದು ಬಂದಿದೆ.

ಭಾರತ-ಚೀನಾ ಗಡಿಯಲ್ಲಿ ಈಗಾಗಲೇ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಉಭಯ ದೇಶಗಳ ನಡುವೆ ವಾಕ್ಸಮರ ಮುಂದುವರೆದಿದೆ. ಭಾರತ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳದ ಹೊರತು ಯಾವದೇ ಮಾತುಕತೆಯನ್ನು ನಡೆಸುವದಿಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ.