ಸಿದ್ದಾಪುರ, ಜು. 6: ಸಮೀಪದ ಪಾಲಿಬೆಟ್ಟ ರಸ್ತೆಯ ಸುಣ್ಣದಗೂಡುವಿನಲ್ಲಿ ಆರಂಭಿಸಿರುವ ಮದ್ಯದಂಗಡಿಯನ್ನು ಕೂಡಲೇ ತೆರವುಗೊಳಿಸಬೇಕೆಂದು ಸ್ಥಳೀಯ ಮಹಿಳೆಯರು ಗ್ರಾ.ಪಂ. ಮುಂಭಾಗ ಪ್ರತಿಭಟನೆ ನಡೆಸಿದರು.ಪಾಲಿಬೆಟ್ಟ ರಸ್ತೆಯ ಸುಣ್ಣದಗೂಡು ಎಂಬಲ್ಲಿಗೆ ಪಟ್ಟಣದ ಮದ್ಯದಂಗಡಿಯನ್ನು ಸ್ಥಳಾಂತರಿಸಿದ್ದು, ಯಾವದೇ ಅಧಿಕೃತ ದಾಖಲೆಗಳಿಲ್ಲದೇ ಮದ್ಯದಂಗಡಿಯನ್ನು ಆರಂಭಿಸಿದ್ದಾರೆ ಎಂದು ಆರೋಪಿಸಿದ ಸ್ಥಳೀಯರು ಪ್ರತಿಭಟನೆ ನಡೆಸಿದರು. ಮಂಗಳವಾರ ಸಂಜೆ ತೆರೆÀದ ಅಂಗಡಿಯ ವಿರುದ್ಧ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿದ ಸಂದರ್ಭ ಅಂಗಡಿ ಮಾಲೀಕ ಹಾಗೂ ಸ್ಥಳೀಯರ ನಡುವೆ ವಾಗ್ವಾದ ನಡೆಯಿತು. ಬಳಿಕ ಅಬಕಾರಿ ಇಲಾಖೆಯ ಪತ್ರದೊಂದಿಗೆ ರಾತ್ರಿ ಆಗಮಿಸಿದ ಇಲಾಖೆ ಅಧಿಕಾರಿ ಲಕ್ಷ್ಮೀಶ ಮಾತನಾಡಿ, ಮದ್ಯದಂಗಡಿ ತೆರೆಯಲು ಗ್ರಾ.ಪಂ.ನಿಂದ ನಿರಾಕ್ಷೇಪಣಾ ಪತ್ರದ ಅವಶ್ಯಕತೆ ಇರುವದಿಲ್ಲ. ಮದ್ಯ ಮಾರಾಟಗಾರರಿಗೆ ಇಲಾಖೆಯಿಂದ ಅನುಮತಿ ನೀಡಲಾಗಿದೆ. ಅದರಂತೆ ಇಲ್ಲಿ ಮಾರಾಟ ಮಾಡ ಬಹುದು. ಯಾವದೇ ಉಲ್ಲಂಘನೆ ಆಗುತ್ತಿಲ್ಲ. ಅಂಗಡಿಯು ರಾಜ್ಯ ಹೆದ್ದಾರಿ ಅಂತರ ಕಾಯ್ದುಕೊಂಡಿದೆ ಎಂದರು.

ಬುಧವಾರ ಗ್ರಾ.ಪಂ ಸದಸ್ಯರಾದ ಹುಸೈನ್ ಹಾಗೂ ಜಾಫರ್ ಅಲಿ ನೇತೃತ್ವದಲ್ಲಿ ಗ್ರಾ.ಪಂ ಮುಂಭಾಗ ಪ್ರತಿಭಟಿಸಿದ ಮಹಿಳೆಯರು ಅಧಿಕಾರಿಯ ವಿರುಧ್ಧ ಅಸಮಾಧಾನ ವ್ಯಕ್ತಪಡಿಸಿ, ಘೋಷಣೆಗಳನ್ನು ಕೂಗಿದರು.

(ಮೊದಲ ಪುಟದಿಂದ) ಸ್ಥಳೀಯ ನಿವಾಸಿ ಸಲೀನ ಮಾತನಾಡಿ, ಈ ಭಾಗದಲ್ಲಿ ಬಡ ಕಾರ್ಮಿಕರೇ ಹೆಚ್ಚಾಗಿದ್ದು, ಸ್ಥಳೀಯರ ವಿರೋಧದ ನಡುವೆಯೂ ಮದ್ಯ ಮಾರಾಟ ಮಾಡುತ್ತಿದ್ದಾರೆ. ಸಿದ್ದಾಪುರ ಪಾಲಿಬೆಟ್ಟ ಮುಖ್ಯ ರಸ್ತೆಯಾಗಿದ್ದು, ರಸ್ತೆ ಬದಿಯಲ್ಲೇ ಮದ್ಯದಂಗಡಿ ಇರುವದರಿಂದ ಅಪಘಾತಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಸಮೀಪವೇ ಕುಡಿಯುವ ನೀರಿನ ಬಾವಿಯಿದ್ದು, ಮದ್ಯ ಪ್ರಿಯರು ಆವರಣವನ್ನು ಅಶುಚಿತ್ವ ಗೊಳಿಸುತ್ತಿದ್ದಾರೆ. ಮಹಿಳೆಯರು ಒಬ್ಬಂಟಿಯಾಗಿ ಇರಲು ಹೆದರಿಕೆಯಾಗುತ್ತಿದೆ. ಶಾಲಾ ಮಕ್ಕಳು ಮತ್ತು ಮಹಿಳೆಯರಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ. ಕೂಡಲೇ ಮದ್ಯದಂಗಡಿಯನ್ನು ತೆರವು ಗೊಳಿಸಬೇಕೆಂದರು.

ಬಳಿಕ ಮನವಿ ಪತ್ರವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಅವರಿಗೆ ನೀಡಿದರು. ಈ ಸಂದರ್ಭ ಮಾತನಾಡಿದ ಅಧಿಕಾರಿ, ಈಗಾಗಲೇ ಗ್ರಾ.ಪಂ. ಸರ್ವ ಸದಸ್ಯರು ಮದ್ಯದಂಗಡಿಗೆ ವಿರೋಧ ವ್ಯಕ್ತಪಡಿಸಿದ್ದರೂ, ಅಂಗಡಿ ಮಾಲೀಕರು ಅಬಕಾರಿ ಇಲಾಖೆಯ ಪತ್ರದೊಂದಿಗೆ ಅಂಗಡಿ ತೆರೆದಿದ್ದಾರೆ. ಇದರ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು.

ಸಿದ್ದಾಪುರ ಠಾಣಾಧಿಕಾರಿ ಸುಬ್ರಮಣ್ಯ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಮದ್ಯದಂಗಡಿ ಸಮೀಪವಿರುವವರಿಗೆ ಯಾವದೇ ರೀತಿಯ ತೊಂದರೆ ಉಂಟಾದಲ್ಲಿ ಕೂಡಲೇ ಪೊಲೀಸರನ್ನು ಸಂಪರ್ಕಿಸುವಂತೆ ಮನವಿ ಮಾಡಿದ ಅವರು, ಸಾರ್ವಜನಿಕರ ರಕ್ಷಣೆಗೆ ಜೊತೆಗಿದ್ದೇವೆ ಎಂದರು.

ಪ್ರತಿಭಟನೆಯಲ್ಲಿ ಸ್ಥಳೀಯರಾದ ಉಷಾ, ವಿಲಾಸಿನಿ, ಅನ್ಸಾರ್, ಲಲಿತಾ, ಪವಿತ್ರಾ, ಸುಂದರ ಸೇರಿದಂತೆ ಮತ್ತಿತರರು ಇದ್ದರು.