ಮಡಿಕೇರಿ, ಜು. 5: ಪ್ರಸಕ್ತ(2017-18ನೇ) ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯಿಂದ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ರಾಜ್ಯವಲಯ ಯೋಜನೆಗಳ ಅಡಿಯಲ್ಲಿ ಅನುದಾನ ಲಭ್ಯವಿದ್ದು, ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ತಾಲೂಕು ಪಂಚಾಯಿತಿ ಯೋಜನೆಯಡಿ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ರೂ. 5 ಸಾವಿರ ಮೌಲ್ಯದ ಮೀನುಗಾರಿಕೆ ಸಲಕರಣೆಗಳನ್ನು ಉಚಿತವಾಗಿ ವಿತರಿಸಲಾಗುವದು.

ಜಿಲ್ಲಾ ಪಂಚಾಯಿತಿ ಯೋಜನೆಯಡಿ ಜೌಗು ಮತ್ತು ಚೌಳು ಪ್ರದೇಶದಲ್ಲಿ ಒಂದು ಎಕರೆ ಕೊಳ ನಿರ್ಮಾಣ ಮಾಡಲು ರೂ. 30 ಸಾವಿರ ಸಹಾಯ ಧನ ನೀಡಲಾಗುವದು. ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಮೀನುಗಾರಿಕೆಗೆ ಅಗತ್ಯವಿರುವ ರೂ. 10 ಸಾವಿರ ಮೌಲ್ಯದ ಸಲಕರಣೆ ಕಿಟ್ಟುಗಳ ಉಚಿತ ವಿತರಣೆ ಯೋಜನೆ ಮತ್ತು ಕನಿಷ್ಟ ಅರ್ಧ ಎಕರೆ ಕೊಳ ನಿರ್ಮಾಣಕ್ಕೆ ರೂ. 80 ಸಾವಿರಗಳ ಸಹಾಯ ಧನ ಯೋಜನೆ. ಕೃಷಿ ಹೊಂಡಗಳಲ್ಲಿ ಮೀನು ಕೃಷಿ ನಡೆಸಲು ಉಚಿತವಾಗಿ ತಲಾ 250 ಸಾಮಾನ್ಯ ಗೆಂಡೆ ಮೀನು ಮರಿ ಹಾಗೂ ಶೇ. 50 ರ ಸಹಾಯ ಧನದಲ್ಲಿ ಹುಲ್ಲುಗೆಂಡೆ ಮೀನು ಮರಿಗಳನ್ನು ವಿತರಿಸಲಾಗುವದು. ಸರ್ಕಾರ ನಿಗದಿಪಡಿಸಿರುವ ದರಗಳಲ್ಲಿ ಕೃಷಿಗೆ ಯೋಗ್ಯವಿರುವ ವಿವಿಧ ತಳಿಗಳ ಮೀನು ಮರಿಗಳನ್ನು ಇಲಾಖೆಯಲ್ಲಿ ನೋಂದಾಯಿಸಿರುವ ರೈತರಿಗೆ ವಿತರಿಸಲಾಗುವದು. ಮೀನು ಮಾರಾಟಗಾರರಿಗೆ ಮೀನು ಮಾರಾಟ ಮಾಡಲು ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ ವಾಹನ ಖರೀದಿಸಲು ಕ್ರಮವಾಗಿ ರೂ. 10 ಸಾವಿರ, ರೂ. 30 ಸಾವಿರ, ರೂ. 35 ಸಾವಿರಗಳ ಸಹಾಯ ಧನ ವಿತರಣೆ.

ರಾಜ್ಯವಲಯ ಯೋಜನೆಯಡಿ ಪರಿಶಿಷ್ಟ ಜಾತಿಯ ಮೀನು ಮಾರಾಟಗಾರರು 2017-18ನೇ ಸಾಲಿನಲ್ಲಿ ನಾಲ್ಕು ಚಕ್ರ ವಾಹನ ಖರೀದಿಸಲು ರೂ. 4.40 ಲಕ್ಷದಷ್ಟು ಸಹಾಯ ಧನ, ಪರಿಶಿಷ್ಟ ಜಾತಿ ಮತ್ತು ವರ್ಗದ ಫಲಾನುಭವಿಗಳಿಗೆ ತಲಾ ರೂ. 20 ಸಾವಿರಗಳ ಮೌಲ್ಯದ ಮೀನುಗಾರಿಕೆ ಸಲಕರಣೆ ಕಿಟ್ಟು ವಿತರಣೆ, ಮೀನುಮರಿ ಖರೀದಿಸಿದ ರೈತರಿಗೆ ಖರೀದಿಯ ಮೊತ್ತದ ಮೇಲೆ ಶೇ. 50 ರ ಸಹಾಯ ಧನ ನೀಡಲಾಗುವದು.

ಈ ಎಲ್ಲಾ ಯೋಜನೆಗಳು ಸರ್ಕಾರ ನಿಗದಿಪಡಿಸಿರುವ ಗುರಿಯನ್ವಯ ಅನುಷ್ಠಾನಗೊಳ್ಳಲಿದ್ದು, ಮೊದಲು ಬಂದ ಫಲಾನುಭವಿಗಳಿಗೆ ಆದ್ಯತೆ ನೀಡಲಾಗುವದು. ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಯೋಜನೆಯಡಿ ಫಲಾನುಭವಿ ಪಟ್ಟಿಯನ್ನು ಆಯಾಯ ಸಮಿತಿಗಳಲ್ಲಿ ಮಂಡಿಸಲಾಗುವದು.

ಹೆಚ್ಚಿನ ವಿವರಗಳಿಗೆ ರೈತರು ಮಡಿಕೇರಿ ತಾಲೂಕು-08272-222801, ಸೋಮವಾರಪೇಟೆ ತಾಲೂಕು 08276-281051, ಪೊನ್ನಂಪೇಟೆ-08274-261477 ನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.