ಮಡಿಕೇರಿ, ಜು. 5: ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಆಯುಷ್ ಪದ್ಧತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಮಿತ್ತ ಸಮಗ್ರ ಹಾಗೂ ಸಾರ್ವತ್ರಿಕ ಆರೋಗ್ಯ ಸೇವೆಯಲ್ಲಿ ಬಳಸಿಕೊಳ್ಳಲು ಹಾಲಿ ಜಾರಿಯಲ್ಲಿರುವ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನೀತಿಯನ್ನು ವಿಮರ್ಶಿಸಿ ಪಾರಂಪರಿಕ/ನಾಟಿ ವೈದ್ಯ ಪದ್ಧತಿಯನ್ನು ಸದೃಢಗೊಳಿಸಲು ಮತ್ತು ಪಾರಂಪರಿಕ ವೈದ್ಯರಿಗೆ ಕೌಶಲ್ಯ ವರ್ಧನೆ ಮತ್ತು ತರಬೇತಿ ನೀಡುವ ಸಲುವಾಗಿ ಆಯುಷ್ ಇಲಾಖೆ ಕಂದಾಯ ಇಲಾಖೆಯ ಸಹಯೋಗದೊಂದಿಗೆ ಪಾರಂಪರಿಕ ವೈದ್ಯ ಪದ್ಧತಿ ಅನುಸರಿಸುತ್ತಿರುವವರನ್ನು ಗುರುತಿಸಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬೇಕಾಗುತ್ತದೆ.

ಅದಕ್ಕೆ ಸ್ಥಳೀಯ ಮಟ್ಟದಲ್ಲಿ ಕಂದಾಯ ಇಲಾಖೆಯ ಪಿ.ಡಿ.ಓ. ಇವರುಗಳಿಂದ ಪಾರಂಪರಿಕ ವೈದ್ಯ ವೃತ್ತಿ ನಡೆಸುತ್ತಿರುವವರನ್ನು ಸ್ಥಳೀಯರಾದ ಅಧ್ಯಕ್ಷರು, ಸದಸ್ಯರು, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು/ಸ್ಥಳೀಯ ಆಯುಷ್ ಇಲಾಖೆ ವೈದ್ಯಾಧಿಕಾರಿ, ಡಿಎಓ ಅವರಿಂದ ವಿವರವಾಗಿ ಶಿಫಾರಸ್ಸು ಹೊಂದಿ ದೃಢೀಕರಿಸಿದ ಪ್ರತಿಯನ್ನು ರಾಜ್ಯ ಮಟ್ಟದ ಸಮಿತಿಗೆ ಸಲ್ಲಿಸಲು ತಾವು ತಮ್ಮ ಅಧೀನದಲ್ಲಿರುವ ಪಿ.ಡಿ.ಓ.ಗಳಿಗೆ ಗ್ರಾಮಸಭೆಗಳಿಂದ ಮೊದಲ್ಗೊಂಡು ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಕೋರಿದೆ.

ಸಂಬಂಧಿಸಿದ ಮಾಹಿತಿಯನ್ನು ಅಧ್ಯಕ್ಷರು, ಸದಸ್ಯರು, ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸ್ಥಳೀಯ ಆಯುಷ್ ಇಲಾಖೆಯ ವೈದ್ಯರು ಹಾಗೂ ಜಿಲ್ಲಾ ಆಯುಷ್ ಅಧಿಕಾರಿಗಳ ದೃಢೀಕರಣದೊಂದಿಗೆ ಸಲ್ಲಿಸಬೇಕಾಗಿರುವದರಿಂದ ಕೂಡಲೇ ಕ್ರಮ ಕೈಗೊಳ್ಳಬೇಕಾಗಿರುವದರಿಂದ ತಾ. 31 ಕೊನೆಯ ದಿನ ಎಂದು ನಿಗಿದಿಪಡಿಸಲಾಗಿದೆ. ನಾಟಿ ವೈದ್ಯರು/ಪಾರಂಪರಿಕ ವೈದ್ಯರುಗಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿ.ಡಿ.ಓ)ಗಳನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದು ಎಂದು ಜಿಲ್ಲಾ ಆಯುಷ್ ಕಚೇರಿಯ ಜಿಲ್ಲಾ ಆಯುಷ್ ಅಧಿಕಾರಿ ತಿಳಿಸಿದ್ದಾರೆ.