ಸಿದ್ದಾಪುರ, ಜು. 6: ಸಿದ್ದಾಪುರ ಠಾಣಾ ವ್ಯಾಪ್ತಿಗೆ ಒಳಪಡುವ ಸರಕಾರಿ ನೌಕರರಿಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮಾಹಿತಿ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಮಾತನಾಡಿದ ಸಿದ್ದಾಪುರ ಠಾಣಾಧಿಕಾರಿ ಜಿ.ಕೆ. ಸುಬ್ರಮಣ್ಯ, ಸರಕಾರಿ ನೌಕರರು ಆಯಾ ಕಚೇರಿ ಎದುರು ಹಾಗೂ ಶಾಲೆಗಳ ಶಿಕ್ಷಕರು ತಂಬಾಕು ನಿಷೇಧದ ಬಗ್ಗೆ ನಾಮಫಲಕ ಅಳವಡಿಸಬೇಕೆಂದರು. ಆಯಾ ಕಚೇರಿಗಳ ಮುಂದೆ ಮಾದಕ ವಸ್ತುಗಳನ್ನು ಮಾರಾಟ ಮಾಡದಂತೆ ತಿಳಿಸಬೇಕು. ಯಾವದೇ ಅಹಿತಕರ ಚಟುವಟಿಕೆಗಳು ನಡೆಯದಂತೆ ಎಚ್ಚರವಹಿಸಬೇಕು. ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಹಾಗೂ ಭಿಕ್ಷಾಟನೆ ಮಾಡುವದು ಕಂಡುಬಂದಲ್ಲಿ ಮಾಹಿತಿ ನೀಡುವಂತೆ ತಿಳಿಸಿದರು.
ಈಗಾಗಲೇ ಜಾರಿಗೊಂಡಿರುವ ನಗದು ರಹಿತ ವ್ಯವಹಾರದ ಬಗ್ಗೆ ಹಾಗೂ ಇನ್ನಿತರ ಮುಂಜಾಗ್ರತೆಯನ್ನು ತೆಗೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿಗಳಾದ ವಸಂತ್ ಕುಮಾರ್, ಗಣಪತಿ ಹಾಗೂ ಸಿದ್ದಾಪುರ ಪಂಚಾಯಿತಿ ಪಿ.ಡಿ.ಓ. ವಿಶ್ವನಾಥ್, ವೈದ್ಯಾಧಿಕಾರಿ ಡಾ. ರಾಘವೇಂದ್ರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮ ಕುಮಾರಿ, ಹಾಗೂ ವಿವಿಧ ಸರಕಾರಿ ನೌಕರರು ಹಾಜರಿದ್ದರು.