ಸೋಮವಾರಪೇಟೆ, ಜು. 5: ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ದೂರ ಉಳಿಯದಂತೆ ಮಾಡಲು ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಇಲ್ಲಿಗೆ ಸಮೀಪದ ಐಗೂರು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಅವರು ಮಾತನಾಡಿದರು. ಅವಕಾಶಗಳ ಸದ್ಬಳಕೆಗೆ ಶಿಕ್ಷಣ ಮುಖ್ಯ. ಇಂದು ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳಿವೆ. ಪ್ರತಿಯೋರ್ವ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸುವತ್ತ ಚಿಂತನೆ ಮಾಡಬೇಕು. ಸರಕಾರವು ನೀಡುತ್ತಿರುವ ಯೋಜನೆಗಳ ಪ್ರಯೋಜನ ಎಲ್ಲಾ ವಿದ್ಯಾರ್ಥಿಗಳಿಗೆ ಸಿಗುವಂತಾದಾಗ ಮಾತ್ರ ಇಲಾಖೆ ಕಾರ್ಯಕ್ರಮಗಳಿಗೆ ಅರ್ಥ ಬರುತ್ತದೆ ಎಂದರು.

ಈ ಸಂದರ್ಭ ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಸ್. ಚಂಗಪ್ಪ, ಆರ್‍ಎಂಸಿ ಸದಸ್ಯ ಡಿ.ಎಸ್. ಪೊನ್ನಪ್ಪ, ತಾಲೂಕು ಪಂಚಾಯಿತಿ ಸದಸ್ಯೆ ಸಬಿತ ಚನ್ನಕೇಶವ, ಪ್ರಭಾರ ಮುಖ್ಯಶಿಕ್ಷಕ ಯಶವಂತ್ ಮತ್ತಿತರರು ಉಪಸ್ಥಿತರಿದ್ದರು.