ಕೂಡಿಗೆ, ಜು. 6: ಕೂಡಿಗೆ ಯಲ್ಲಿರುವ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಕಾರ್ಪೋರೇಶನ್ ಬ್ಯಾಂಕ್ ಸಹಯೋಗದಲ್ಲಿ ವಾರ್ಷಿಕ ಚಟುವಟಿಕೆಗಳ 2016-17ರ ಲೆಕ್ಕಪತ್ರಗಳ ಕಾರ್ಯಚಟುವಟಿಕೆ ಮಂಡಿಸುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಕಾರ್ಪೋರೇಶನ್ ಬ್ಯಾಂಕ್ ಮೈಸೂರು ವಲಯದ ಡಿ.ಜಿ.ಎಂ. ಗಣಪತಿ ಮಾತನಾಡಿ, ಕಾರ್ಪೋರೇಶನ್ ಬ್ಯಾಂಕ್ ಸ್ವ-ಉದ್ಯೋಗ ಸಮಸ್ಯೆ ಪರಿಹರಿಸುತ್ತಾ, ಸ್ವಉದ್ಯೋಗ ಕಲ್ಪಿಸಲು ತರಬೇತಿ ನೀಡುತ್ತಾ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆಪ್ತ ಯೋಜನೆಗಳು ಮತ್ತು ಕಾರ್ಪೋರೇಶನ್, ನಬಾರ್ಡ್ ಬ್ಯಾಂಕ್ಗಳು ಯೋಜನೆಗಳನ್ನು ರೂಪಿಸಿ ನಿರುದ್ಯೋಗಿ ಯುವಕ, ಯುವತಿಯರಿಗೆ ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಲು ಹಲವಾರು ವಿಷಯ ತಜ್ಞರನ್ನು ಈ ತರಬೇತಿ ಕೇಂದ್ರಕ್ಕೆ ಕರೆಸಿ ಅವರ ವಿದ್ವತ್ತನ್ನು ಪ್ರಶಿಕ್ಷಣಾರ್ಥಿಗಳಿಗೆ ಸಮರ್ಪಣೆ ಮಾಡಿಸಲು ಸಂಸ್ಥೆ ಶ್ರಮಿಸುತ್ತಿದೆ ಎಂದು ಹೇಳಿದರು.
ಜಿಲ್ಲಾ ನಬಾರ್ಡ್ ಮುಖ್ಯ ಪ್ರಬಂಧಕ ಎಂ.ಸಿ. ನಾಣಯ್ಯ ಮಾತನಾಡಿ, ಸುಮಾರು 2 ಸಾವಿರಕ್ಕೂ ಅಧಿಕ ನಿರುದ್ಯೋಗಿ ಯುವಕರು ಬೇರೆ ಬೇರೆ ಪದವಿಗಳನ್ನು ಪಡೆದವರು ಇಲ್ಲಿ ತರಬೇತಿ ಪಡೆದಿದ್ದಾರೆ.
ಅವರಲ್ಲಿ ಸುಮಾರು 719 ಕ್ಕೂ ಅಧಿಕ ಮಂದಿ ಸ್ವಾವಲಂಭಿ ಬದುಕಿಗಾಗಿ ವಿವಿಧ ಉದ್ದಿಮೆಗಳನ್ನು ಸ್ಥಾಪಿಸಿಕೊಂಡಿದ್ದಾರೆ. ಬ್ಯಾಂಕ್ಗಳು ಅವರಿಗೆ ಆಸರೆಯಾಗಿ ನಿಂತಿವೆ.
ಸರ್ಕಾರ ರೂಪಿಸಿರುವ ‘ಸ್ಟಾಂಡಪ್ ಇಂಡಿಯಾ’ ಯೋಜನೆ ಯುವ ಉದ್ದಿಮೆದಾರರನ್ನು ಸೃಷ್ಟಿಸುವ ಉತ್ತಮ ಯೋಜನೆಯಾಗಿದೆ. 10 ಲಕ್ಷದಿಂದ 1 ಕೋಟಿ ರೂ.ಗಳವರೆಗೆ ಈ ಯೋಜನೆಯಲ್ಲಿ ಸಾಲ ಸೌಲಭ್ಯ ಪಡೆಯಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮುಮ್ತಾಜ್, ಲೀಡ್ ಬ್ಯಾಂಕ್ನ ನಿವೃತ್ತ ಪ್ರಬಂಧಕ ಕೆ.ಎ. ದೇವಯ್ಯ, ಯುವ ಉದ್ಯಮಿ ಅರುಣ್ ಕುಮಾರ್ ಮಾತನಾಡಿದರು. ಈ ಸಂದರ್ಭ ಕಾಬ್ಸೆಟ್ನ ಕಾರ್ಯಚಟುವಟಿಕೆಗಳು 2016-17 ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಪೋರೇಶನ್ ಸ್ವ-ಉದ್ಯೋಗ ಸಂಸ್ಥೆಯ ನಿರ್ದೇಶಕ ನಾಗೇಂದ್ರ ವಹಿಸಿದ್ದರು. ಮೈಸೂರು ವಲಯ ಪ್ರಬಂಧಕ ಗಣಪತಿ ನಾಗೇಂದ್ರ ಅವರ ನಿವೃತ್ತಿಯನ್ನು ಘೋಷಿಸಿ, ಸನ್ಮಾನಿಸಿ, ಗೌರವಿಸಲಾಯಿತು.
ಸಭೆಯಲ್ಲಿ ಕುಶಾಲನಗರ ಬ್ಯಾಂಕ್ ವ್ಯವಸ್ಥಾಪಕ ಸೋಮಪ್ಪ, ಮಡಿಕೇರಿ ಬ್ಯಾಂಕ್ ವ್ಯವಸ್ಥಾಪಕ ಅಂತೋಣಿ, ತರಬೇತಿ ಸಂಸ್ಥೆಯ ಮನೋಜ್ ಕುಮಾರ್, ಹಿರಿಯ ಕಚೇರಿ ನಿರ್ವಾಹಕ ಸಲಾವುದ್ದೀನ್, ಸುಶ್ಮಿ ಇದ್ದರು.