ಸೋಮವಾರಪೇಟೆ, ಜು. 8: ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ. ರೋಡ್‍ನಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ನಿನ್ನೆ ಸಾವನ್ನಪ್ಪಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಶರತ್ ಮಡಿವಾಳ ಅವರ ನಿಧನಕ್ಕೆ ಸೋಮವಾರಪೇಟೆ ನಗರದಲ್ಲಿ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸಂತಾಪ ಸೂಚಿಸಿದರು.

ನಗರದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಪುಟ್ಟಪ್ಪ ವೃತ್ತದಲ್ಲಿ ಸೇರಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹತ್ಯೆ ಕೃತ್ಯವನ್ನು ಖಂಡಿಸಿದರು. ಈ ಸಂದರ್ಭ ಮಾತನಾಡಿದ ಸಂಘಟನೆಯ ಮುಖಂಡ ಮಹೇಶ್ ತಿಮ್ಮಯ್ಯ, ರಾಜ್ಯದಾದ್ಯಂತ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದರೂ ಆಡಳಿತದಲ್ಲಿರುವ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.

ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇದಕ್ಕೆ ಕಡಿವಾಣ ಹಾಕಬೇಕಾದ ರಾಜ್ಯ ಸರ್ಕಾರ ಕೈಕಟ್ಟಿ ಕುಳಿತಿದೆ. ಶರತ್ ಅವರ ಹತ್ಯೆಗೆ ಕಾರಣರಾದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಲ್ಲೂ ಪೊಲೀಸ್ ಇಲಾಖೆ ವಿಫಲವಾಗಿದೆ. ಸರ್ಕಾರವು ಹಿಂದೂಗಳ ಮೇಲೆ ಧಮನಕಾರಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭ ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ಹಿಂದೂಪರ ಸಂಘಟನೆಗಳ ಮುಖಂಡರಾದ ಸುಭಾಷ್ ತಿಮ್ಮಯ್ಯ, ಉಮೇಶ್, ಟಿ.ಕೆ. ರಮೇಶ್, ದರ್ಶನ್ ಜೋಯಪ್ಪ, ಯಡೂರು ದರ್ಶನ್, ಬನ್ನಳ್ಳಿ ಗೋಪಾಲ್, ಸತೀಶ್, ರಾಘವ ಸೇರಿದಂತೆ ಇತರ ಕಾರ್ಯಕರ್ತರು ಭಾಗವಹಿಸಿದ್ದರು.