ಆಲೂರುಸಿದ್ದಾಪುರ, ಜು. 8: ಬೆಳ್ಳಂಬೆಳಿಗ್ಗೆ ಕಾಫಿ ತೋಟಗಳಿಗೆ ಏಕಾಏಕಿ ನುಗ್ಗಿದ್ದ ಕಾಡಾನೆಗಳ ಹಿಂಡು ದಾಂಧಲೆ ಎಬ್ಬಿಸಿ ಗ್ರಾಮಸ್ಥರನ್ನು ಗಾಬರಿಗೊಳಿಸಿದ ನಂತರ ಗ್ರಾಮಸ್ಥರು ಕಾಡಾನೆಗಳನ್ನು 4 ಕಿ.ಮೀ.ದೂರದ ತನಕ ಓಡಿಸಿಕೊಂಡು ಹೋಗಿ ಅರಣ್ಯಕ್ಕೆ ಅಟ್ಟಿದ ಘಟನೆ ಶನಿವಾರ ಬೆಳಿಗ್ಗೆ ನಿಡ್ತ ಗ್ರಾ.ಪಂ.ವ್ಯಾಪ್ತಿಯ ಹಿತ್ಲುಕೇರಿ ಗ್ರಾಮದಲ್ಲಿ ನಡೆದಿದೆ.ಶನಿವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಚೌಡನಹಳ್ಳಿ ಗ್ರಾಮದಿಂದ ಬಂದ ಮರಿ ಸೇರಿದಂತೆ ಒಟ್ಟು 6 ಕಾಡಾನೆಗಳ ಹಿಂಡು ಹಿತ್ಲುಕೇರಿ

(ಮೊದಲ ಪುಟದಿಂದ) ಗ್ರಾಮದ ಕಾಫಿ ತೋಟವೊಂದಕ್ಕೆ ನುಗ್ಗಿ ತೋಟದೊಳಗೆ ದಾಂಧಲೆ ಎಬ್ಬಿಸಿವೆ, ತೋಟದಲ್ಲಿ ಕಾಡಾನೆಗಳ ಹಿಂಡು ದಾಂಧಲೆ ಎಬ್ಬಿಸುತ್ತಿರುವ ಸುಳಿವು ತಿಳಿದ ನಾಯಿಗಳು ಬೊಗಳುತ್ತಿರು ವದು ಕೇಳಿ ಮನೆಯಿಂದ ಹೊರ ಬಂದ ಕಾಫಿ ತೋಟದ ಮಾಲೀಕರು ತೋಟದಲ್ಲಿ ಕಾಡಾನೆಗಳ ಹಿಂಡು ಓಡಾಡುತ್ತಿರುವದನ್ನು ಗಮನಿಸಿ ಅಕ್ಕಪಕ್ಕದ ತೋಟದ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಅಕ್ಕಪಕ್ಕದ ಕಾಫಿ ತೋಟದ ಮಾಲೀಕರು ಹಾಗೂ ಗ್ರಾಮಸ್ಥರೆಲ್ಲರೂ ಸೇರಿಕೊಂಡು ತೋಟದಿಂದ ಮತ್ತೊಂದು ತೋಟಕ್ಕೆ ಕಾಡಾನೆಗಳನ್ನು ಬೊಬ್ಬೆ ಹಾಕಿಕೊಂಡು ಓಡಿಸಿದ್ದಾರೆ. ಪಟಾಕಿ ಸಿಡಿಸಿ ಮತ್ತು ಇತರ ವಸ್ತುಗಳಿಂದ ಶಬ್ದ ಭರಿಸಿ ಕಾಡಾನೆಗಳನ್ನು ಓಡಿಸಿದ್ದಾರೆ. ಸುಮಾರು 4 ಕಿ.ಮೀ. ದೂರದ ತನಕ ಗ್ರಾಮಸ್ಥರು ಕಾಡಾನೆ ಗಳನ್ನು ಓಡಿಸಿಕೊಂಡು ಹೋಗಿದ್ದಾರೆ. ಕಾಡಾನೆಗಳನ್ನು ತೋಟದೊಳಗೆ ಓಡಿಸುತ್ತಿದ್ದ ಸಂದರ್ಭದಲ್ಲಿ ಗಾಬರಿಗೊಂಡ ಹಿಂಡಿನಲ್ಲಿದ್ದ ಕೆಲವು ಆನೆಗಳು ಗ್ರಾಮಸ್ಥರನ್ನು ಅಟ್ಟಾಡಿಸಿದ ಪ್ರಸಂಗ ಕೂಡ ಎದುರಾಯಿತು. ಭಯಭೀತರಾದ ಗ್ರಾಮಸ್ಥರು ಎದ್ದೆನೋ ಬಿದ್ದೆನೋ ಎಂಬಂತೆ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ. ಕೊನೆಗೆ ಕಾಫಿ ತೋಟದಿಂದ ಹೊರಬಂದ ಕಾಡಾನೆಗಳ ಹಿಂಡು ಕಾರ್ಗೋಡು ಬಳಿ ಶನಿವಾರಸಂತೆ ಮುಖ್ಯರಸ್ತೆಯನ್ನು ದಾಟಿಕೊಂಡು ಕಾರ್ಗೋಡು ಮೀಸಲು ಅರಣ್ಯದೊಳಗೆ 4 ಕಿ.ಮೀ. ದೂರದ ತನಕ ಕಾಡಾನೆಗಳನ್ನು ಓಡಿಸಿಕೊಂಡು ಹೋದ ಗ್ರಾಮಸ್ಥರು ಕಾಡಿಗೆ ಅಟ್ಟುವಲ್ಲಿ ಕೊನೆಗೂ ಯಶಸ್ವಿಯಾದರು. ಕಾರ್ಯಾಚರಣೆ ಯಲ್ಲಿ ಹಿತ್ಲುಕೇರಿ ಗ್ರಾಮದ 50 ಕ್ಕಿಂತ ಹೆಚ್ಚಿನ ಗ್ರಾಮಸ್ಥರು ಪಾಲ್ಗೊಂಡಿದ್ದರು

ಇದೇ 6 ಕಾಡಾನೆಗಳ ಹಿಂಡು ಶನಿವಾರ ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಚೌಡೇನಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿವೆ. ಚೌಡೇನಹಳ್ಳಿ ಗ್ರಾಮದ ಖತೀಜ ಬಾಬು ಎಂಬುವರು ಬೆಳಗ್ಗೆ 7 ಗಂಟೆ ಸಮಯದಲ್ಲಿ ತಮ್ಮ ಮನೆಯ ಮುಂದೆ ನಾಯಿಗಳು ಬೊಗಳುತ್ತಿರುವದನ್ನು ಗಮನಿಸಿ ಹೊರಬಂದಾಗ ಮನೆಯ ಮುಂದೆ ಕಾಡಾನೆಗಳು ಇರುವದನ್ನು ತಿಳಿದು ಗಾಬರಿಯಿಂದ ಮನೆಯೊಳಗೆ ಓಡಿಹೋಗಿ ಬಾಗಿಲು ಹಾಕಿಕೊಂಡಿ ದ್ದಾರೆ. ಈ ಸಂದರ್ಭದಲ್ಲಿ ಹಿಂಡಿನಲ್ಲಿದ್ದ ಆನೆಯೊಂದು ಖತೀಜ ಬಾಬು ಅವರ ಮನೆಯ ಗೋಡೆಗೆ ಅಪ್ಪಳಿಸಿದೆ. ಇದರಿಂದ ಅವರ ವಾಸದ ಮನೆಯ ಗೋಡೆ ಬಿರುಕು ಗೊಂಡಿದೆ. ಅಕ್ಕಪಕ್ಕದ ಮನೆಯವರು ಕೂಗಿಕೊಂಡಾಗ ಕಾಡಾನೆಗಳ ಹಿಂಡು ನಿಡ್ತ, ಹಿತ್ಲುಕೇರಿ ಗ್ರಾಮಗಳತ್ತ ನುಸುಳಿದವು ಎಂದು ಗ್ರಾಮಸ್ಥರು ಹೇಳುತ್ತಾರೆ. -ದಿನೇಶ್ ಮಾಲಂಬಿ