ಗೋಣಿಕೊಪ್ಪಲು, ಜು. 8: ದಕ್ಷಿಣ ಕೊಡಗಿನ ಪ್ರಮುಖ ವಾಣಿಜ್ಯನಗರಿ ಹಲವು ಸಾಂಕ್ರಾಮಿಕ ರೋಗಗಳನ್ನು ಸಾರ್ವಜನಿಕರಿಗೆ ಉಡುಗೊರೆಯಾಗಿ ನೀಡುವ ದಿನ ದೂರವಿಲ್ಲ. ಇಲ್ಲಿನ ಗ್ರಾಮ ಪಂಚಾಯಿತಿ ಇತ್ತೀಚೆಗೆ ಸ್ವಚ್ಛತಾ ಆಂದೋಲನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆದರೆ ನಗರದಲ್ಲಿ ಸ್ವಚ್ಛತೆ ಮಾಯವಾಗಿ ಎಷ್ಟೋ ವರ್ಷ ಗತಿಸಿಹೋಗಿದೆ. ಗೋಣಿಕೊಪ್ಪಲಿನ ಜನಸಂಖ್ಯೆ 10 ಸಾವಿರಕ್ಕೂ ಕಡಿಮೆ ಇದೆ. ಆದರೆ, ದಕ್ಷಿಣ ಕೊಡಗಿನ ಬಹುತೇಕ ಗ್ರಾಮಗಳಿಗೆ ಇದು ಸಂಪರ್ಕ ಕೇಂದ್ರವಾಗಿದ್ದು ದಿನನಿತ್ಯ 25 ಸಾವಿರದಿಂದ 50 ಸಾವಿರ ಸಾರ್ವಜನಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳು, ಕಾರ್ಮಿಕರು ಇಲ್ಲಿನ ರಸ್ತೆಯಲ್ಲಿ ದಿನನಿತ್ಯ ಓಡಾಟ ನಡೆಸುತ್ತಾರೆ. ಉತ್ತಮ ಶೌಚ ವ್ಯವಸ್ಥೆ ಇಲ್ಲದಿರುವ ಹಿನ್ನೆಲೆ ನಗರದ ಸಂದಿ ಗೊಂದಿಗಳೇ ಮೂತ್ರವಿಸರ್ಜನೆ ತಾಣವಾಗಿದೆ. ಅಂತರರಾಜ್ಯ ಹೆದ್ದಾರಿ ಆಗಿರುವ ಹಿನ್ನೆಲೆ ಇಲ್ಲಿ ದಿನದ 24 ಗಂಟೆಯೂ ನೆರೆಯ ಕೇರಳಕ್ಕೆ ನೂರಾರು ಬಸ್ಸುಗಳು ಓಡಾಟ ನಡೆಸುತ್ತವೆ. ಆದರೆ, ರಾತ್ರಿ ಗೋಣಿಕೊಪ್ಪಲಿನಲ್ಲಿ ಬಸ್ ಇಳಿದವರು ಮೂತ್ರವಿಸರ್ಜನೆಗೆ ಪರದಾಡುವದು ಮಾತ್ರ್ರ ಅಸಹನೀಯ.

ಬೆಳೆಯುತ್ತಿರುವ ಗೋಣಿಕೊಪ್ಪಲು ನಗರದಲ್ಲಿ ಸ್ವಚ್ಛತೆ ಮಾಯವಾಗಿದೆ. ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ನಗರಾಭಿವೃದ್ಧಿಯ ಪೂರಕ ಕೆಲಸಗಳ ಬದ್ಧತೆ ಕಾಣೆಯಾಗಿದೆ. ಆರೋಪ-ಪ್ರತ್ಯಾರೋಪದೊಂದಿಗೆ ಸಭೆಗಳು ಮುಕ್ತಾಯಗೊಳ್ಳುತ್ತಿದೆ. ಇಲ್ಲಿನ ಪ್ರಮುಖ ಹೊಳೆ ಕೀರೆಹೊಳೆ ದಿನನಿತ್ಯ ಕಸವಿಲೇವಾರಿ ಕೇಂದ್ರವಾಗಿ ಗಬ್ಬೆದ್ದು ನಾರುತ್ತಿದೆ. ಬೈಪಾಸ್ ಸಮೀಪ ಹರಿಯುವ ಕೈಕೇರಿ ತೋಡು ಅತಿಕ್ರಮಣಗೊಂಡು ಮಲೀನವಾಗುತ್ತಿದೆ. ಸ್ವಚ್ಛತೆಯ ಪ್ರಜ್ಞೆ ಇಲ್ಲದ ಕೆಲವು ಸಾರ್ವಜನಿಕರು, ವರ್ತಕರಿಂದ ಇಲ್ಲಿನ ಮುಖ್ಯರಸ್ತೆ, ಬೈಪಾಸ್ ರಸ್ತೆಯ ಬದಿ, ಚರಂಡಿ, ಇಷ್ಟೇ ಯಾಕೆ? ಎಲ್ಲೆಲ್ಲೆ ಖಾಲಿ ಜಾಗ ಕಾಣಿಸುತ್ತದೆಯೋ ಅಲ್ಲೆಲ್ಲಾ ಕಸವಿಲೇವಾರಿ ಮಾಡಲಾಗುತ್ತದೆ. ಇಲ್ಲಿನ ಚರಂಡಿಗಳು ಸೂಕ್ತ ನಿರ್ವಹಣೆ ಇಲ್ಲದೆ ಡೆಂಗ್ಯು ಸೊಳ್ಳೆಗಳ ಉತ್ಪತಿ ಕೇಂದ್ರವಾಗುತ್ತಿದೆ. ಮಳೆಯ ನೀರು ಹರಿದುಹೋಗಲು ಅಸಾಧ್ಯವಾದ ದುಸ್ಥಿತಿಯಲ್ಲಿದೆ ನಗರದ ಚರಂಡಿಗಳು.

ಇಲ್ಲಿನ ಜನ ಹಗಲು ನೆಮ್ಮದಿಯಿಂದ ಕಳೆಯುವಂತಿಲ್ಲ. ರಾತ್ರಿ ನೆಮ್ಮದಿಯಿಂದ ನಿದ್ರಿಸುವಂತಿಲ್ಲ. ಇಡೀ ನಗರವೇ ಸೊಳ್ಳೆಗಳ ತಾಣವಾಗಿದೆ. ಇಲ್ಲಿನ ಬಸ್ ನಿಲ್ಧಾಣದಲ್ಲಿಯೇ ಕಸದ ರಾಶಿಯನ್ನು ಕಾಣಬಹುದು. ಜತೆಗೆ ಅಲ್ಲಲ್ಲಿ ತ್ಯಾಜ್ಯ ನೀರಿನಿಂದ ಕೂಡಿದ ಗುಂಡಿಗಳು. ಇದರ ನಡುವೆಯೇ ಇಲ್ಲಿ ಸಾರ್ವಜನಿಕರ ನಿತ್ಯ ಜಂಜಾಟ ಕಾಣುತ್ತದೆ. ನೂತನ ತಾತ್ಕಾಲಿಕ ಬಸ್ ತಂಗುದಾಣದ ಹಿಂದೆ ಮುಂದೆ ಕಸದ ಗುಡ್ಡೆ ಕಣ್ಣಿಗೆ ರಾಚುತ್ತದೆ.

ದಕ್ಷಿಣ ಕೊಡಗಿನಲ್ಲಿ ಆರೋಗ್ಯ ಇಲಾಖೆಯ ಅಂಕಿ ಅಂಶದ ಪ್ರಕಾರ ಒಟ್ಟು 22 ಡೆಂಗ್ಯು ಪ್ರಕರಣಗಳು ಈಚೆಗೆ ಪತ್ತೆಯಾಗಿವೆ. ಬಾಳೆಲೆ ಗಂಧದಗುಡಿ ಪೈಸಾರಿ ವ್ಯಾಪ್ತಿಯಲ್ಲಿ-9, ಗೋಣಿಕೊಪ್ಪಲಿನಲ್ಲಿ-4, ಚೆನ್ನಯ್ಯನಕೋಟೆ ವ್ಯಾಪ್ತಿಯಲ್ಲಿ 3, ಕಾಕೋಟುಪರಂಬುವಿನಲ್ಲಿ 2, ಕಣ್ಣಂಗಾಲದಲ್ಲಿ 3 ಹಾಗೂ ಹುದಿಕೇರಿಯಲ್ಲಿ 1 ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೂಕ್ತ ಚಿಕಿತ್ಸೆ ನೀಡಲಾಗಿದೆ ಎನ್ನಲಾಗುತ್ತಿದೆ. ಈಚೆಗೆ ಬಿದ್ದ ಆಶಾದಾಯಕ ಮಳೆಯಿಂದಾಗಿ ಅಲ್ಲಲ್ಲಿ ನಿಂತಿದ್ದ ಕೊಳಚೆ ನೀರು ಕೊಚ್ಚಿಹೋಗಿದ್ದರೂ, ಇದೀಗ ಮತ್ತೆ ಮಳೆ ವ್ಯತ್ಯಯದಿಂದಾಗಿ ಅಲ್ಲಲ್ಲಿ ನೀರು ನಿಲ್ಲುವ ಮೂಲಕ ಸೊಳ್ಳೆಯ ಸಂತಾನೋತ್ಪತ್ತಿಗೆ ಮತ್ತೆ ಅವಕಾಶವಾಗಿದೆ.

ಡೆಂಗ್ಯು ಜ್ವರ ಹಗಲು ಹೊತ್ತಿನಲ್ಲಿ ಕಚ್ಚುವ ‘ಏಡಿಸ್ ಈಜಿಪ್ಟಿ’ ಅಥವಾ ‘ಟೈಗರ್’ ಸೊಳ್ಳೆಗಳಿಂದ ಹರಡುತ್ತದೆ ಎಂದು ವೀರಾಜಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ.ಯತಿರಾಜ್ ಮಾಹಿತಿ ನೀಡಿದ್ದಾರೆ. ತಾಲೂಕಿನಾದ್ಯಂತ ‘ಲಾರ್ವಾ ಸಮೀಕ್ಷೆ’ ಕೈಗೊಳ್ಳಲಾಗಿದೆ. ಡೆಂಗ್ಯು ಜ್ವರ ಕಂಡು ಬಂದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಮನೆಯ ಸುತ್ತ ಮುತ್ತ, ಎಲ್ಲಿಯೂ ನೀರು ಮೂರು ದಿನಕ್ಕೂ ಅಧಿಕ ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆ ಮೊಟ್ಟೆ ಇಟ್ಟು ಸಂತಾನೋತ್ಪತಿ ಮಾಡಲು ಅವಕಾಶ ನೀಡಬಾರದು ಎಂದು ಮಾಹಿತಿ ನೀಡಿದ್ದಾರೆ.ಜ್ವರ ಬರುವದು, ಕಣ್ಣಿನ ಗುಡ್ಡೆಯಲ್ಲಿ ನೋವು ಕಾಣಿಸಿಕೊಳ್ಳುವದು ಡೆಂಗ್ಯು ಲಕ್ಷಣಗಳು. ಈ ಬಗ್ಗೆ ಸಮೀಪದ ಆರೋಗ್ಯ ಕೇಂದ್ರಕ್ಕೆ ತೆರಳಿ ಕೂಡಲೇ ಚಿಕಿತ್ಸೆಹೊಂದಲು ಡಾ.ಯತಿರಾಜ್ ತಿಳಿಸಿದ್ದಾರೆ.

ಪೆÇನ್ನಂಪೇಟೆ ಸೀತಾ ಕಾಲೋನಿಯಲ್ಲಿ ಕಸವಿಲೇವಾರಿಗೆ ಗುರುತಿಸಿರುವ ಜಾಗದಲ್ಲಿ ಕಾಮಗಾರಿ ಮುಗಿದಿದ್ದರೂ ಇನ್ನೂ ಇಲ್ಲಿನ ರಾಶಿಗಟ್ಟಲೆ ಕಸ ತೆರವು ಭಾಗ್ಯ ಕಾಣುತ್ತಿಲ್ಲ. ಉದ್ದೇಶಿತ ಸೀತಾ ಕಾಲೋನಿಯ ಜಾಗ ಕಸ ವಿಲೇವಾರಿಗೆ ಸಾಕಾಗುವದಿಲ್ಲ. ಸಮರ್ಪಕ ಕಾಮಗಾರಿ, ಅವ್ಯವಸ್ಥೆ ಅಲ್ಲಿಯೂ ಕಂಡು ಬಂದಿದೆ. ಕಾಮಗಾರಿಗೆ ನೀಡಬೇಕಿದ್ದ ಪಾಲು ಹಣವನ್ನು ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಇನ್ನೂ ಸಂಪೂರ್ಣ ಪಾವತಿಸ ದಿರುವದರಿಂದ ಕಸ ವಿಲೇವಾರಿ ನೆನೆಗುದಿಗೆ ಬಿದ್ದಿದೆ ಎನ್ನಲಾಗುತ್ತಿದೆ. ಕಸ ಸ್ಥಳಾಂತರಕ್ಕೆ ಎಲ್ಲಿಯೂ ಜಾಗ ಸಿಗದ ಹಿನ್ನೆಲೆ ಮುಖ್ಯರಸ್ತೆ ಬದಿಯಲ್ಲಿಯೇ ಕಸವನ್ನು ಬಿಡಬೇಕಾದ ಸ್ಥಿತಿ ಇದೆ. ಚರಂಡಿಯಲ್ಲಿ ತುಂಬಿದ್ದ ಹೂಳೆತ್ತಿದ್ದರೂ ಅದನ್ನು ಸಾಗಿಸಲೂ ಪರ್ಯಾಯ ಸ್ಥಳವಿಲ್ಲ.

ಗೋಣಿಕೊಪ್ಪಲಿನ ಹಿಂದೂ ಸ್ಮಶಾನ ಮುಂಭಾಗ, ಹರಿಶ್ಚಂದ್ರಪುರ, ಇಲ್ಲಿನ 2 ನೇ ವಿಭಾಗ,3 ನೇ ವಿಭಾಗ, ಬೈಪಾಸ್ ರಸ್ತೆ, ಎರಡೂ ಭಾಗದಲ್ಲಿ ಹರಿಯುತ್ತಿರುವ ಹೊಳೆಗಳು, ಮುಖ್ಯರಸ್ತೆ ಬದಿಯ ವಿದ್ಯುತ್ ಕಂಬಗಳ ಬುಡದಲ್ಲಿ ದಿನನಿತ್ಯ ನಗರದ ಕಸ ಸಂಗ್ರಹಣೆಯಾಗುತ್ತಿದೆ. ಇಲ್ಲಿನ ಗ್ರಾ.ಪಂ.ಮುಂದೆಯೂ ಕಸವನ್ನು ಮೂಟೆ ಕಟ್ಟಿ ಇಡಲಾಗಿದೆ.

ಇಲ್ಲಿನ ವರ್ತಕರ ಸಂಘವೂ ಇನ್ನು ಮುಂದೆ ಕಠಿಣ ನಿಲುವು ವ್ಯಕ್ತಪಡಿಸಬೇಕಾಗಿದೆ. ಹಣ ಸಂಪಾದನೆ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವದು ಮುಖ್ಯ ಅನ್ನುವ ಪಾಠವನ್ನು ಎಲ್ಲರಿಗೂ ಹೇಳಿಕೊಡಬೇಕಾಗಿದೆ.

ಇಲ್ಲೊಂದು ಶುದ್ಧ ಕುಡಿಯುವ ನೀರಿನ ಘಟಕ, ದಿನದ 24 ಗಂಟೆ ಕಾರ್ಯನಿರ್ವಹಿಸುವ ಪಾವತಿ ಶೌಚಾಲಯ ಅಗತ್ಯ ಆಗಬೇಕಾಗಿದೆ. ನಗರದ ಎಲ್ಲ ಚರಂಡಿಯ ದುರಸ್ತಿ ಹಾಗೂ ಇಲ್ಲಿನ ಕೀರೆಹೊಳೆ ಮತ್ತು ಬೈಪಾಸ್ ರಸ್ತೆ ಸಮೀಪದ ತೋಡಿನ ಹೂಳೆತ್ತುವ ಮೂಲಕ ಮಳೆನೀರು, ಕೊಳಚೆ ನೀರು ಸರಾಗವಾಗಿ ಹರಿದುಹೋಗಲು ಗ್ರಾ.ಪಂ.ತುರ್ತು ಕಾರ್ಯಕ್ರಮ ಹಾಕಿಕೊಳ್ಳಬೇಕಾಗಿದೆ. ಪ್ರಮುಖವಾಗಿ ನೀರು ನಿಂತ ಕಡೆಗಳಲ್ಲಿ ಸೊಳ್ಳೆ ನಿರೋಧಕ ಔಷಧಿ ಸಿಂಪರಣೆ ಆಗಬೇಕಾಗಿದೆ.

ಈ ಹಿಂದೆ ಮೂರು ದಿನ ಹಾಕಿಕೊಂಡಿದ್ದ ಗ್ರಾಮಪಂಚಾಯಿತಿ ಮಟ್ಟದ ಸ್ವಚ್ಛತಾ ಆಂದೋಲನಾ ಏನೇನೂ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಿ, ಮನೆ ಮನೆಗೆ ತೆರಳಿ ಡೆಂಗ್ಯು ಹಾಗೂ ಇತ್ಯಾದಿ ಮಾರಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವೂ ಆಗಬೇಕಾಗಿದೆ. ಒಟ್ಟಿನಲ್ಲಿ ರೋಗದ ಗೂಡಾಗುತ್ತಿರುವ ಗೋಣಿಕೊಪ್ಪಲಿನಲ್ಲಿ ಇದನ್ನೆಲ್ಲಾ ಸಮರ್ಥವಾಗಿ ಮುನ್ನಡೆಸುವದು ಇಂದಿನ ತುರ್ತು ಅಗತ್ಯ.

- ಟಿ.ಎಲ್. ಶ್ರೀನಿವಾಸ್