ಕರಿಕೆ, ಜು. 8: ಪಶ್ಚಿಮ ಘಟ್ಟ ಪ್ರದೇಶದ ಭಾಗವಾದ ಕರಿಕೆ ವ್ಯಾಪ್ತಿಯಲ್ಲಿ ಕಳೆದ 8 ವರ್ಷಗಳಿಂದ ಭರೂಕ ಕಿರುಜಲ ವಿದ್ಯುತ್ ಘಟಕವು ಕಾರ್ಯನಿರ್ವಹಿಸುತ್ತಿದ್ದು, 10 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮಥ್ರ್ಯವನ್ನು ಹೊಂದಿದೆ. 24 ಸಿಬ್ಬಂದಿಗಳು, 6 ಮಂದಿ ಇಂಜಿನಿಯರ್ ಸೇರಿದಂತೆ ಒಟ್ಟು 30 ನೌಕರರನ್ನು ಒಳಗೊಂಡಿದೆ. ಈ ಬಾರಿ ಕರಿಕೆ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿಯುತ್ತಿರುವದರಿಂದ ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗುವ ನಿರೀಕ್ಷೆಯನ್ನು ಕಂಪೆನಿ ಹೊಂದಿದೆ.

ಕಳೆದ ಬಾರಿ ಇದೇ ಅವಧಿಯಲ್ಲಿ 1300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಿದ್ದು, ವಾರ್ಷಿಕ 11,500 ಮೆಗಾವ್ಯಾಟ್ ವಿದ್ಯುತ್ತನ್ನು ಉತ್ಪಾದಿಸಿತ್ತು. ಈ ಬಾರಿ ಈಗಾಗಲೇ 1400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಿದ್ದು, 100 ಮೆಗಾವ್ಯಾಟ್ ಅಧಿಕ ಉತ್ಪಾದನೆಯಾಗಿದೆ. ತಲಕಾವೇರಿ ಭಾಗದಲ್ಲಿ ಉತ್ತಮ ಮಳೆಯಾದರೆ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗುತ್ತದೆ.

ತಲಕಾವೇರಿಯಲ್ಲಿ 73 ಇಂಚು ಮಳೆಯಾಗಿದ್ದು, ಕರಿಕೆ ವ್ಯಾಪ್ತಿಯಲ್ಲಿ 24 ಇಂಚು ಮಳೆಯಾಗಿದೆ. ಆದರೆ ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು ನೆರೆಯ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯಕ್ಕೆ ಸರಬರಾಜು ಮಾಡಲಾಗುತ್ತಿದ್ದು, ಇದರಿಂದ ಈ ಗ್ರಾಮದ ಜನತೆ ಕೇರಳದ ವಿದ್ಯುತ್ತನ್ನು ನಂಬಿ ಬದುಕಬೇಕಾಗಿರುವದು ವಿಪರ್ಯಾಸವೇ ಸರಿ. ಪ್ರಸ್ತುತ ವಿದ್ಯುತ್ ಘಟಕದಲ್ಲಿ ಸಾವಿರಾರು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ ಸರಕಾರ ಸ್ಥಳೀಯವಾಗಿ ಉಪಯೋಗಿಸಲು ವ್ಯವಸ್ಥೆ ಮಾಡದಿರುವದು ಈ ಗ್ರಾಮದ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ ದೀಪದ ಕೆಳಗೆ ಕತ್ತಲು ಎಂಬ ನಾಣ್ಣುಡಿಯಂತೆ ಜನತೆ ಮಾತ್ರ ಘಟಕದಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು ನೋಡಿ ಆನಂದ ಪಡಬೇಕಷ್ಟೇ.

- ಹೊದ್ದೆಟ್ಟಿ ಸುಧೀರ್