ಮಡಿಕೇರಿ, ಜು. 8 : ಪಶುಭಾಗ್ಯ ಯೋಜನೆ ಅನುಷ್ಠಾನ ಸಂಬಂಧ ನಗರದ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಸಿ.ನಾಗರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕರು, ಅಧಿಕಾರಿಗಳು ಭಾಗವಹಿಸಿದ್ದರು.

ಸಣ್ಣ ಮತ್ತು ಅತೀ ಸಣ್ಣ ರೈತರು ‘ಪಶುಭಾಗ್ಯ’ ಯೋಜನೆಯಡಿ ಹಸು, ಹಂದಿ, ಕೋಳಿ, ಆಡು ಘಟಕಗಳನ್ನು ಸ್ಥಾಪಿಸಿ ಆರ್ಥಿಕವಾಗಿ ಸ್ವಾವಲಂಬನೆ ಗಳಿಸಿ ಉತ್ತಮ ಜೀವನ ನಡೆಸುವಂತಾಗಬೇಕು ಎಂಬ ಆಶಯದಿಂದ ಸರ್ಕಾರ ‘ಪಶುಭಾಗ್ಯ’ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಅಧಿಕಾರಿ ಕರೆ ನೀಡಿದರು.

ಪಶುಭಾಗ್ಯ ಯೋಜನೆಯಡಿ ವಾಣಿಜ್ಯ ಬ್ಯಾಂಕುಗಳಿಂದ ಗರಿಷ್ಠ 1.20 ಲಕ್ಷ ರೂ.ವರೆಗೆ ಸಾಲ ಪಡೆದು ಹಸು, ಹಂದಿ, ಕೋಳಿ, ಆಡು, ಕುರಿ ಘಟಕಗಳನ್ನು ಸ್ಥಾಪಿಸಲು ಸಹಾಯಧನ ನೀಡಲಾಗುತ್ತದೆ. ಪಶುಭಾಗ್ಯ ಯೋಜನೆಯಡಿ ಎರಡು ಹಸುಗಳನ್ನು ಒದಗಿಸಲಾಗುತ್ತದೆ. ಇದಕ್ಕಾಗಿ 1.20 ಲಕ್ಷ ರೂ. ಘಟಕ ವೆಚ್ಚ ನಿಗದಿಯಾಗಿದೆ. ಹಂದಿ ಸಾಕಾಣಿಕೆಯಲ್ಲಿ 4 ಹಂದಿ ಸಾಕಾಣಿಕೆಗೆ ನೀಡಲಾಗುತ್ತಿದ್ದು, 94 ಸಾವಿರ ರೂ. ಘಟಕ ವೆಚ್ಚವಾಗಿದೆ. ಆಡು ಸಾಕಾಣಿಕೆಯಲ್ಲಿ 11 ಆಡುಗಳನ್ನು ನೀಡಲಾಗುತ್ತಿದ್ದು, 67,440 ಘಟಕ ವೆಚ್ಚ ಒದಗಿಸಲಾಗುತ್ತದೆ. ಹಾಗೆಯೇ 500 ಮಾಂಸದ ಕೋಳಿ ಸಾಕಾಣಿಕೆಗಾಗಿ ಒಂದು ಲಕ್ಷ ರೂ. ಘಟಕ ವೆಚ್ಚವನ್ನು ಭರಿಸಲಾಗುತ್ತದೆ ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಸಿ.ನಾಗರಾಜು ಮಾಹಿತಿ ನೀಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಹೈನುಗಾರಿಕೆಗೆ 126 ಫಲಾನುಭವಿಗಳ ಗುರಿಯನ್ನು ಹೊಂದಲಾಗಿದ್ದು, ಸಾಮಾನ್ಯ 108, ಪರಿಶಿಷ್ಟ ಜಾತಿ 13, ಪರಿಶಿಷ್ಟ ಪಂಗಡ 5 ಮತ್ತು ಮಹಿಳೆಯರಿಗೆ (ಫಲಾನುಭವಿಗಳಿಗೆ) ಹಸುಗಳನ್ನು ನೀಡುವ ಗುರಿ ಹೊಂದಲಾಗಿದೆ. ಆಡು/ಕುರಿ ಸಾಕಾಣಿಕೆಯಲ್ಲಿ ಒಬ್ಬ ಫಲಾನುಭವಿಗೆ 11 ಆಡು, ಕುರಿ ನೀಡಲಾಗುತ್ತಿದ್ದು, ಸಾಮಾನ್ಯ 15, ಪರಿಶಿಷ್ಟ ಜಾತಿ 3, ಒಟ್ಟು 19 ಫಲಾನುಭವಿಗಳ ಗುರಿಯನ್ನು ಹೊಂದಲಾಗಿದೆ.

ಹಂದಿ ಸಾಕಾಣಿಕೆಯಲ್ಲಿ ಒಂದು ಕುಟುಂಬಕ್ಕೆ 4 ಹಂದಿಯನ್ನು ಸಾಕಾಣಿಕೆಗೆ ನೀಡಲಾಗುತ್ತದೆ. ಸಾಮಾನ್ಯ 5, ಪರಿಶಿಷ್ಟ ಜಾತಿ 1, ಪರಿಶಿಷ್ಟ ಪಂಗಡ 1 ಒಟ್ಟು 7 ಫಲಾನುಭವಿಗಳ ಗುರಿಯನ್ನು ಹೊಂದಲಾಗಿದೆ. ಕೋಳಿ ಸಾಕಾಣಿಕೆಯಲ್ಲಿ 500 ಮಾಂಸದ ಕೋಳಿ ಘಟಕಗಳನ್ನು ಹೊಂದಲಾಗಿದ್ದು, ಸಾಮಾನ್ಯ ಕುಟುಂಬ 5, ಪರಿಶಿಷ್ಟ ಜಾತಿ 1, ಒಟ್ಟು 6 ಫಲಾನುಭವಿಗಳ ಗುರಿಯನ್ನು ಹೊಂದಲಾಗಿದೆ.

ಪಶುಭಾಗ್ಯ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಶೇ.50ರಷ್ಟು ಸಹಾಯಧನ, ಹಾಗೆಯೇ ಸಾಮಾನ್ಯ ವರ್ಗದವರಿಗೆ ಶೇ.25ರಷ್ಟು ಸಹಾಯಧನವನ್ನು ಕಲ್ಪಿಸಲಾಗುತ್ತದೆ. ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ ಹಾಗೂ ಅಮೃತ್ ಯೋಜನೆಗಳು ಪಶುಭಾಗ್ಯ ಯೋಜನೆ ವ್ಯಾಪ್ತಿಗೆ ಒಳಪಡಲಿದೆ. ಅಮೃತ್ ಯೋಜನೆಯಡಿ ವಿಧವೆಯರಿಗೆ, ವಿಕಲಚೇತನ ಮಹಿಳೆಯರಿಗೆ ಹಾಗೂ ತೃತೀಯ ಲಿಂಗಿಗಳಿಗೆ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಮಾಹಿತಿ ನೀಡಿದ್ದಾರೆ.

ಅರ್ಹರು ಹತ್ತಿರದ ಪಶು ಚಿಕಿತ್ಸಾಲಯಗಳು, ತಾಲೂಕು ಪಶುಸಂಗೋಪನಾ ಇಲಾಖೆಯಲ್ಲಿ ಅರ್ಜಿ ಪಡೆದು ಜುಲೈ 31 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರ ಕಚೇರಿ ಅಥವ ಹತ್ತಿರದ ಪಶುಪಾಲನಾ ಇಲಾಖೆ ಕಚೇರಿಗಳಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಡಾ.ಸಿ.ನಾಗರಾಜು ತಿಳಿಸಿದ್ದಾರೆ.