ಮಡಿಕೇರಿ, ಜು. 8: ರಾಷ್ಟ್ರೀಯ ಲೋಕ ಅದಾಲತ್ ಸೇವೆಯಡಿ ಇಂದು ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ, ಸಾರ್ವಜನಿಕ ಅಹವಾಲುಗಳನ್ನು ರಾಜೀ ಸಂಧಾನ ಮೂಲಕ ಇತ್ಯರ್ಥಗೊಳಿಸುವ ಮೂಲಕ ಒಟ್ಟು 189 ಪ್ರಕರಣಗಳಿಗೆ ತೆರೆ ಎಳೆಯಲಾಯಿತು. ಈ ದಿಸೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದಿಂದ ನೆರವು ಕಲ್ಪಿಸಲಾಗಿತ್ತು.ಮಾಸಿಕ ರಾಷ್ಟ್ರೀಯ ಹಾಗೂ ಲೋಕ ಅದಾಲತ್ ಮೂಲಕ ಮೋಟಾರು ವಾಹನ ಅಪಘಾತ, ಭೂಸ್ವಾದೀನ ಪ್ರಕರಣಗಳು, ಸ್ಥಳೀಯ ಸಂಸ್ಥೆಗಳ ವ್ಯಾಜ್ಯ, ವಿದ್ಯುತ್ ಗ್ರಾಹಕ ವಿವಾದಗಳು, ಬ್ಯಾಂಕ್ ಸಂಬಂಧ, ವೈವಾಹಿಕ ಅಥವಾ ಜೀವನಾಂಶ ಪ್ರಕರಣಗಳು, ಕಾರ್ಮಿಕ-ಮಾಲೀಕರ ನಡುವಿನ ವಿವಾದಗಳು ಸೇರಿದಂತೆ ಜನತಾ ನ್ಯಾಯಾಲಯದಲ್ಲಿ ದಾಖಲಾಗಿದ್ದ 103 ಪ್ರಕರಣಗಳು ಇಂದು ಇತ್ಯರ್ಥಗೊಂಡಿವೆ.

ಅಲ್ಲದೆ ವ್ಯಾಜ್ಯ ಪೂರ್ವ ಪ್ರಕರಣಗಳು ವಿವಿಧ ವಿವಾದಗಳಿಗೆ ಸಂಬಂಧಿಸಿದಂತೆ 86 ಪ್ರತ್ಯೇಕ ದೂರಗಳನ್ನು ಕೂಡ ರಾಜೀ ಸಂಧಾನ ಮೂಲಕ ಬಗೆಹರಿಸಲಾಯಿತು.

ಜಿಲ್ಲಾ ಕೇಂದ್ರದಲ್ಲಿರುವ ಮಡಿಕೇರಿಯ ನ್ಯಾಯಾಲಯ ಸಮುಚ್ಚಯದಲ್ಲಿ ಈ ಸಲುವಾಗಿಯೇ ದ್ವಿತೀಯ ಶನಿವಾರದ ಸರಕಾರಿ ರಜೆ ದಿನವಾದರೂ ಪ್ರತ್ಯೇಕ ಐವರು ನ್ಯಾಯಾಧೀಶದ ನೇತೃತ್ವದಲ್ಲಿ ವಿವಾದಗಳನ್ನು ಇತ್ಯರ್ಥಗೊಳಿಸಲು ಐದು ಬೆಂಚು (ಪೀಠ)ಗಳನ್ನು ಅಣಿಗೊಳಿಸಲಾಗಿತ್ತು.

ನೂರಾರು ಸಂಖ್ಯೆಯಲ್ಲಿ ವ್ಯಾಜ್ಯದಾರರು ಮತ್ತು ಎದುರುದಾರರು ನ್ಯಾಯಾಧೀಶರ ಮುಂದೆ ಹಾಜರಾಗಿ, ತಮ್ಮ ತಮ್ಮ ಅಹವಾಲುಗಳನ್ನು ತೋಡಿಕೊಳ್ಳುವ ಮೂಲಕ ರಾಜೀ ಸಂಧಾನಕ್ಕೆ ಸಮ್ಮತಿಸಿ ಸಮಸ್ಯೆ ಪರಿಹರಿಸಿಕೊಂಡರು.

ನ್ಯಾಯಾಲಯಕ್ಕೆ ಈ ಸಂಬಂಧ ಬೇರೆ ಬೇರೆ ಪ್ರಕರಣಗಳ ಕುರಿತು 319 ಅರ್ಜಿಗಳು ಬಂದಿದ್ದರೆ, ವ್ಯಾಜ್ಯ ಪೂರ್ವವಾಗಿ 300ಕ್ಕೂ ಅಧಿಕ ದೂರುಗಳು ಸಲ್ಲಿಕೆಯಾಗಿದ್ದವು. ಕೌಟುಂಬಿಕ, ಭೂವಿವಾದ, ಅಪಘಾತಗಳ ಸಹಿತ ದೂರುದಾರರಿಂದ ಅಹವಾಲುಗಳನ್ನು ಆಲಿಸಿದ ನ್ಯಾಯಾಧೀಶರುಗಳು, ಪ್ರಕರಣಗಳ ಇತ್ಯರ್ಥದೊಂದಿಗೆ ನೆಮ್ಮದಿಯ ಜೀವನ ಕಂಡು ಕೊಳ್ಳುವಂತೆ ಸಂಬಂಧಪಟ್ಟವರಿಗೆ ತಿಳಿ ಹೇಳುತ್ತಿದ್ದುದು ಕಂಡುಬಂತು.

(ಮೊದಲ ಪುಟದಿಂದ) ಜಿಲ್ಲಾ ಪ್ರಧಾನ ನ್ಯಾಯಾಧೀಶ ರಾದ ಆರ್.ಕೆ.ಜೆ.ಎಂ.ಎಂ. ಮಹಾಸ್ವಾಮೀಜಿ, ಅಪರ ನ್ಯಾಯಾಧೀಶರಾದ ಡಿ. ಪವನೇಶ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಸೆಲ್ವಕುಮಾರ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಹನುಮಂತಪ್ಪ, ಅಪರ ನ್ಯಾಯಾಧೀಶರಾದ ಶಿವಾನಂದ ಆಂಚಿ ಇವರುಗಳು ವ್ಯಾಜ್ಯಗಳ ಇತ್ಯರ್ಥ ಸಂಬಂಧ ಮಾರ್ಗದರ್ಶನ ನೀಡಿದರು.

ಸರಕಾರಿ ವಕೀಲರುಗಳಾದ ಪ್ರೀತಂ, ದೀಪಕ್, ಕವೀಂದ್ರ, ಕೃಷ್ಣಭಟ್ ಹಾಗೂ ದಯಾನಂದ ಇವರುಗಳು ಕಾನೂನು ನೆರವು ನೀಡಿದರು. ನ್ಯಾಯಾಂಗ ಇಲಾಖೆಯ ನೌಕರರು ಕೂಡ ರಜೆಯ ನಡುವೆ ಈ ಸಂಬಂಧ ಕರ್ತವ್ಯ ನಿರ್ವಹಿಸಿದರು.

ಜಿಲ್ಲೆಯ ಸೋಮವಾರಪೇಟೆ, ಕುಶಾಲನಗರ, ವೀರಾಜಪೇಟೆ ನ್ಯಾಯಾಲಯಗಳಲ್ಲಿ ಕೂಡ ರಾಷ್ಟ್ರೀಯ ಲೋಕ ಅದಾಲತ್ ಸಲುವಾಗಿ ಇಂದು ಕಾರ್ಯನಿರ್ವಹಿಸುವದರ ಮೂಲಕ ಇತ್ಯರ್ಥಗೊಂಡ ವ್ಯಾಜ್ಯಗಳ ವರದಿಯನ್ನು ಉಚ್ಚ ನ್ಯಾಯಾಲಯ ಮುಖ್ಯಸ್ಥರಿಗೆ (ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ) ರವಾನಿಸಲಾಯಿತು. ಬೆಳಿಗ್ಗೆ 10 ಗಂಟೆಯಿಂದ ಸಂಜೆ ತನಕ ನ್ಯಾಯಾಲಯ ಆವರಣದಲ್ಲಿ ಅಧಿಕ ಜನಸಂದಣಿ ಗೋಚರಿಸಿತು. ಇಂದು ದೇಶದೆಲ್ಲೆಡೆ ಈ ಸಲುವಾಗಿ ನ್ಯಾಯಾಲಯಗಳಲ್ಲಿ ಕೆಲಸ ನಿರ್ವಹಿಸಿದ್ದಾಗಿ ನ್ಯಾಯಾಂಗ ಉದ್ಯೋಗಿ ಜಯಪ್ಪ ಖಚಿತಪಡಿಸಿದ್ದಾರೆ.