ಸೋಮವಾರಪೇಟೆ, ಜು. 8: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರಕ್ಷಕ ಇಲಾಖೆ, ಬಿಟಿಸಿಜಿ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಸ್ಥಳೀಯ ಬಿಟಿಸಿಜಿ ಕಾಲೇಜು ಸಭಾಂಗಣದಲ್ಲಿ ರ್ಯಾಗಿಂಗ್ ನಿಗ್ರಹ ಜಾಗೃತಿ ಕಾನೂನು ಅರಿವು ಕಾರ್ಯಾಗಾರ ನಡೆಯಿತು.

ಕಾರ್ಯಾಗಾರವನ್ನು ಇಲ್ಲಿನ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ್ ಎಫ್. ದೊಡ್ಡಮನಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನ ಸಂಪಾದನೆಗಾಗಿ ಕಾಲೇಜಿಗೆ ಬರಬೇಕು. ರ್ಯಾಗಿಂಗ್‍ನಂತಹ ಕೆಟ್ಟ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ಇತರ ವಿದ್ಯಾರ್ಥಿಗಳು ಮಾನಸಿಕವಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳು ಸಹೋದರತೆಯಿಂದಿರಬೇಕು. ಮುಂದಿನ ಭವಿಷ್ಯ ಕಾಲೇಜಿನಲ್ಲೇ ನಿರ್ಧಾರವಾಗುವದರಿಂದ ಕಲಿಕೆಯಲ್ಲಿ ಆಸಕ್ತಿ ಹೊಂದಬೇಕು ಎಂದರು.

ಪ್ರತಿಯೋರ್ವ ವಿದ್ಯಾರ್ಥಿಯಲ್ಲೂ ಒಂದಿಲ್ಲೊಂದು ಪ್ರತಿಭೆಯಿದ್ದು, ಇದನ್ನು ಇತರ ವಿದ್ಯಾರ್ಥಿಗಳೇ ಗುರುತಿಸಿ ಪ್ರೋತ್ಸಾಹಿಸಬೇಕು. ರ್ಯಾಗಿಂಗ್‍ನಿಂದ ಪ್ರತಿಭೆ ಮಾತ್ರವಲ್ಲ, ವಿದ್ಯಾರ್ಥಿಗಳ ಭವಿಷ್ಯವೂ ಕತ್ತಲೆಗೆ ತಳ್ಳಲ್ಪಡುತ್ತದೆ ಎಂದು ಕಿವಿಮಾತು ಹೇಳಿದ ನ್ಯಾಯಾಧೀಶರು, ಸೌಹಾರ್ದತೆಯ ಸ್ಥಳಗಳಾಗಿ ಕಾಲೇಜು ಆವರಣ ರೂಪುಗೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ತಡೆ ಕಾನೂನಿನ ಬಗ್ಗೆ ಎಲ್ಲರೂ ಅರಿವು ಹೊಂದಿಕೊಳ್ಳಬೇಕು. ರ್ಯಾಗಿಂಗ್‍ನಂತಹ ಮನಸ್ಥಿತಿ ಹೊಂದಿರುವ ವಿದ್ಯಾರ್ಥಿಗಳ ಮನಪರಿವರ್ತನೆಗೆ ಉಪನ್ಯಾಸಕರು ಮುಂದಾಗಬೇಕು. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು ಎಂದರು.

ವೇದಿಕೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ, ವಕೀಲರಾದ ಶಂಕರ್, ಬಿಟಿಸಿಜಿ ಕಾಲೇಜು ಪ್ರಾಂಶುಪಾಲ ಐಪು ಸೇರಿದಂತೆ ಇತರರು ಉಪಸ್ಥಿತರಿದ್ದರು.