ಕುಶಾಲನಗರ, ಜು. 8: ವಚನಗಳ ಮೂಲಕ ಬಸವಣ್ಣ ಸಮಾಜಕ್ಕೆ ಸಂವಿಧಾನ ನೀಡಿದ್ದಾರೆ ಎಂದು ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ಕೆ.ವಿ. ಸುರೇಶ್ ಅಭಿಪ್ರಾಯಪಟ್ಟರು. ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಸಮೀಪದ ಕೂಡಿಗೆಯಲ್ಲಿರುವ ಶ್ರೀ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏರ್ಪಡಿಸಿದ್ದ ವಚನ ಸಾಹಿತ್ಯ ಪಿತಾಮಹ ಫ.ಗು. ಹಳಕಟ್ಟಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

12ನೇ ಶತಮಾನದಲ್ಲಿ ರಚಿತವಾದ ವಚನಗಳನ್ನು ಇಂದಿಗೂ ಪ್ರಸ್ತುತವಾಗುವಂತೆ ನೋಡಿಕೊಂಡ ಸಾಧನೆ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಇವರದ್ದಾಗಿದ್ದು ಸಮಾಜಕ್ಕೆ ದಾರಿದೀಪವಾಗಿರುವ ವಚನಗಳನ್ನು ನಿಸ್ವಾರ್ಥ ಮನೋಭಾವದಿಂದ ಪ್ರತಿಯೊಬ್ಬರಿಗೂ ತಲಪುವಂತೆ ಮಾಡಿರುವದಾಗಿ ತಿಳಿಸಿದರು.

ಉಪನ್ಯಾಸಕ ಸಬಲಂ ಭೋಜಣ್ಣ ರೆಡ್ಡಿ ಮಾತನಾಡಿ, ವಚನ ಸಾಹಿತ್ಯದ ತಿರುಳನ್ನು ಸಮಾಜದ ಮುಂದೆ ತೆರೆದಿಡಲು ಹಳಕಟ್ಟಿ ಅವರಿಗೆ ಅಂದಿನ ಪತ್ರಿಕೆಗಳು ನೆರವು ನೀಡಿದವು. ಕನ್ನಡದ ಮ್ಯಾಕ್ಸ್ ಮುಲ್ಲರ್ ಎಂದೇ ಖ್ಯಾತಿಯಾಗಿರುವ ಹಳಕಟ್ಟಿ ತಾವು ದುಡಿದದ್ದನ್ನೆಲ್ಲಾ ಪುಸ್ತಕ ಪ್ರಕಟಣೆಗೆ ಮೀಸಲಿಟ್ಟಿದ್ದರು ಎಂದು ನೆನಪಿಸಿದರು.

ವಚನ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎಸ್. ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪ್ರಾಂಶುಪಾಲ ಪ್ರಕಾಶ್, ಶಿಕ್ಷಕರಾದ ಮಂಜು, ದಿನೇಶಾಚಾರಿ, ವಿದ್ಯಾರ್ಥಿ ಸಂಘದ ನಾಯಕಿ ಮೋನಿಕ ವೇದಿಕೆಯಲ್ಲಿದ್ದರು.