ಮಡಿಕೇರಿ, ಜು. 8: ಮಡಿಕೇರಿ ನಗರಸಭಾ ವ್ಯಾಪ್ತಿಗೆ ಒಳಪಟ್ಟಿರುವ ಮೂರು ಪ್ರಾಥಮಿಕ ಶಾಲೆಗಳಿದ್ದು, ಈ ಶಾಲೆಗಳು ದಾಖಲೆಗಳ ಪ್ರಕಾರ ಶತಮಾನಗಳನ್ನು ಪೂರೈಸಿದ್ದರೂ ಕೂಡ ಇಂದಿಗೂ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಕನಿಷ್ಟ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸಂಬಂಧಪಟ್ಟವರು ವಿಫಲರಾಗಿದ್ದಾರೆ.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಈ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಆರು ಮಂದಿ ಗೌರವ ಶಿಕ್ಷಕರಿಗೆ (ಅರೆಕಾಲಿಕ) ವರ್ಷಪೂರ್ತಿ ಕನಿಷ್ಟ ಸಂಬಳ ನೀಡದ ಬಗ್ಗೆ ‘ಶಕ್ತಿ’ ಗಮನ ಸೆಳೆದಿತ್ತು. ಹೀಗಿದ್ದು ಕೂಡ ನಗರಸಭೆ ಆಯುಕ್ತರು ಕಾನೂನಿನ ತೊಡಕುಗಳನ್ನು ಹೇಳುತ್ತಾ, ಈ ಶಿಕ್ಷಕರಿಗೆ ಸಂಬಳ ತಡೆಹಿಡಿದಿದ್ದಾರೆ ಎಂದು ನಗರಸಭಾ ಸದಸ್ಯ ಪೀಟರ್ ಆರೋಪಿಸಿದ್ದಾರೆ.

ಅಲ್ಲದೆ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಪ್ರಾರಂಭಗೊಂಡು ತಿಂಗಳು ಕಳೆದಿದ್ದರೂ, ಮಕ್ಕಳಿಗೆ ಲೇಖನ ಸಾಮಗ್ರಿಯೊಂದಿಗೆ ಸಮವಸ್ತ್ರ ಕೂಡ ಕಲ್ಪಿಸದೆ, ಕಳೆದ ಸಾಲಿನಲ್ಲಿ ಸಮವಸ್ತ್ರ ಇತ್ಯಾದಿ ನೀಡಲಾಗಿದೆ ಎಂಬ ಉತ್ತರ ಸಂಬಂಧಪಟ್ಟವರದ್ದಾಗಿದೆ.

ನಗರಸಭೆಯ ಆಡಳಿತ ಕೇವಲ ತನ್ನ ಹಿಡಿತದಲ್ಲಿ ಇಲ್ಲಿನ ಎ.ವಿ. ಪ್ರಾಥಮಿಕ ಶಾಲೆ, ಹಿಂದೂಸ್ಥಾನಿ ಶಾಲೆ ಹಾಗೂ ಜನರಲ್ ತಿಮ್ಮಯ್ಯ ರಸ್ತೆ ಬದಿಯ ಶಾಲೆಗಳನ್ನು ಇರಿಸಿಕೊಂಡಿದೆ. ಈ ಶಾಲೆಗಳ ಗೌರವ ಶಿಕ್ಷಕರನ್ನು ಅನೇಕ ವರ್ಷ ದುಡಿಸಿಕೊಂಡು ಬರಿಗೈನಲ್ಲಿ ಮನೆಗೆ ಕಳುಹಿಸಿರುವ ಆರೋಪವಿದೆ.

ಈ ನಡುವೆ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ಇತ್ಯಾದಿ ಯಾವದೇ ಸೌಲಭ್ಯ ನೀಡದೆ ಬಡ ವಿದ್ಯಾರ್ಥಿಗಳನ್ನು ಪರೋಕ್ಷವಾಗಿ ಶೋಷಣೆಯೊಂದಿಗೆ ಆ ಮಕ್ಕಳ ಹಕ್ಕು ಕಸಿದುಕೊಂಡಂತಿದೆ. ಇತ್ತ ಸ್ವಪ್ರತಿಷ್ಠೆ ಅಥವಾ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಎಂಬಂತೆ ಕಾನೂನಿನ ಅಸ್ತ್ರ ಪ್ರಯೋಗಿಸದೆ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಕನಿಷ್ಟ ಸೌಲಭ್ಯದೊಂದಿಗೆ ಶಿಕ್ಷಕರಿಗೆ ಗೌರವ ವೇತನ ನೀಡಿ ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕಿದೆ. ಬೆಂಗಳೂರು ಇತರೆಡೆಗಳಲ್ಲಿ ಇಂಥ ಶಾಲೆಗಳಲ್ಲಿ ಕಲ್ಪಿಸಿರುವ ಸವಲತ್ತುಗಳು ಇಲ್ಲಿಯೂ ಸಿಗಬೇಕೆಂದು ನೊಂದ ಶಿಕ್ಷಕರು ಮತ್ತು ಈ ಶಾಲಾ ಮುಗ್ದ ಮಕ್ಕಳ ಕೂಗು.

ಚಿತ್ರ - ವರದಿ : ಟಿ.ಜಿ. ಸತೀಶ್