ಸೋಮವಾರಪೇಟೆ, ಜು. 8: ಜಿಲ್ಲೆಯಿಂದ ಹಜ್ ಯಾತ್ರೆಗೆ ತೆರಳಲಿರುವ ಯಾತ್ರಾರ್ಥಿಗಳಿಗೆ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮವು ತಾ. 10ರಂದು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಲಿದೆ ಎಂದು ರಾಜ್ಯ ಹಜ್ ಸಮಿತಿಯ ಸದಸ್ಯ ಕೆ.ಎಂ. ಅಬೂಬಕರ್ ಸಿದ್ಧೀಖ್ ಮೋಂಟು ಗೋಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಡಗಿನ ಯಾತ್ರಿಕರು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಬೆಳಸಲಿದ್ದಾರೆ. ಹಜ್ ಯಾತ್ರಿಕರು ಪ್ರಯಾಣ ಬೆಳೆಸಲು ಅನುಕೂಲವಾಗುವಂತೆ ಜು. 4, 25 ಮತ್ತು 26 ರಂದು ವಿಶೇಷ ವಿಮಾನಗಳು ಮಂಗಳೂರು, ಬೆಂಗಳೂರು, ಹೈದರಾಬಾದ್ ಮತ್ತು ಗೋವಾ ವಿಮಾನ ನಿಲ್ದಾಣಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ರಾಜ್ಯದಿಂದ ಸುಮಾರು 6 ಸಾವಿರ ಮುಸಲ್ಮಾನ ಬಾಂಧವರು ಭಾರತೀಯ ಹಜ್ ಸಮಿತಿ ಮೂಲಕ ಪವಿತ್ರ ಯಾತ್ರೆ ಕೈಗೊಳ್ಳುತ್ತಿದ್ದು, ಆ ಪೈಕಿ ಕೊಡಗಿನಿಂದ 80 ಯಾತ್ರಿಕರು ಪ್ರಯಾಣಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಂದ ಸುಮಾರು 720 ಯಾತ್ರಿಕರು ಹಜ್ ಯಾತ್ರೆಗೆ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ.

ತರಬೇತಿ ಶಿಬಿರ: ಜಿಲ್ಲೆಯ ಹಜ್ ಯಾತ್ರಿಕರಿಗೆ ಹಜ್ ತರಬೇತಿ ಶಿಬಿರವು ಕೊಂಡಂಗೇರಿ ಯತೀಂ ಖಾನಾದಲ್ಲಿ ನಡೆಯಲಿದೆ ಎಂದು ವ್ಯವಸ್ಥಾಪಕ ಶಾದುಲಿ ಫೈಝಿ ತಿಳಿಸಿದ್ದಾರೆ. ಜಿಲ್ಲಾ ಎಸ್‍ವೈಎಸ್ ವತಿಯಿಂದ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ ಕಾರ್ಯ ಕ್ರಮವು ತಾ.17ರ ಸೋಮವಾರ ಬೆಳಗ್ಗೆ 10 ಗಂಟೆಗೆ ಮಡಿಕೇರಿಯ ಬಾಲಭವನದಲ್ಲಿ ನಡೆಯಲಿದ್ದು, ರಾಜ್ಯ ಹಜ್ ಸಮಿತಿ ಸದಸ್ಯ ಕೆ.ಎಂ. ಅಬೂಬಕರ್ ಮೋಂಟುಗೋಳಿ, ಎಸ್‍ವೈಎಸ್ ಅಧ್ಯಕ್ಷ ಅಬ್ದುಲ್ ಹಫೀಳ್ ಸಅದಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.